ದೊಡ್ಡಬಳ್ಳಾಪುರದಲ್ಲಿ ‘ದೀರ್ಘಾಯು’ಗೆ ಚಾಲನೆ

senior
ದೊಡ್ಡಬಳ್ಳಾಪುರದ ಪವಿತ್ರಾ ವೃದ್ಧಾಶ್ರಯಮದಲ್ಲಿ ಹಿರಿಯ ನಾಗರಿಕರ ಉಗುರುಗಳನ್ನು ಕಟ್ ಮಾಡುವ ಮೂಲಕ ದೀರ್ಘಾಯು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Published on
  • ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಹಿರಿಯ ನಾಗರಿಕರಲ್ಲಿ ಸ್ವಚ್ಛತೆ ಉತ್ತೇಜಿಸುವ ಉದ್ದೇಶದಿಂದ ಪ್ರತಿ ಶನಿವಾರ ‘ದೀರ್ಘಾಯು’ ಹೆಸರಿನಡಿ ವಿಶೇಷ ಕಾರ್ಯಕ್ರಮ ರೂಪಿಸಿರುವ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೆ.28ರಂದು ದೊಡ್ಡಬಳ್ಳಾಪುರ ನಗರದ ಪವಿತ್ರ ವೃದ್ಧಾಶ್ರಮದಲ್ಲಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದೆ. ಹಿರಿಯರ ವೈಯಕ್ತಿಕ ಸ್ವಚ್ಛತೆಗೆ ವಿಶೇಷ ಜಾಗೃತಿ ಮೂಡಿಸುವ ಸಲವಾಗಿ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ದೀರ್ಘಾಯು ಕಾರ್ಯಕ್ರಮ ಅನುಷ್ಟಾನಗೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
    ಸಂಸ್ಥೆಗಳ ಸಹಯೋಗ: ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ್ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರ ಉಗುರುಗಳನ್ನು ಕಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿರಿಯ ನಾಗರಿಕರ ವೈಯಕ್ತಿಕ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಹಾಗೂ ವಿವಿಧ ಹಂತಗಳ ಸ್ವಯಂ ಸೇವಕರ ಸಹಯೋಗದೊಂದಿಗೆ ದೀರ್ಘಾಯು ಹೆಸರಿನಲ್ಲಿ ವಿಶೇಷ ಸೇವೆ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
    ದೀರ್ಘಾಯು ಹೆಸರಿನಡಿ ಪ್ರತಿ ಶನಿವಾರ ಹಿರಿಯ ನಾಗರಿಕರ ವೈಯಕ್ತಿಕ ಸ್ವಚ್ಛತಾ ದಿನವನ್ನಾಗಿ ಆಚರಿಸುವ ಕಾರ್ಯಕ್ರಮ ರೂಪಿಸಲಾಗಿದೆ, ಇದು ಹಿರಿಯರ ಆರೋಗ್ಯ ಕಾಳಜಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ, ಈ ಬಗ್ಗೆ ಪ್ರತಿ ಕುಟುಂಬದಲ್ಲಿ ಜಾಗೃತಿ ಮೂಡಿಸುವ ಮೂಲಕ ಹಿರಿಯರ ಯೋಗಕ್ಷೇಮ ಕಾಯುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
    ಸಮಾಜದ ಕಣ್ಣು: ಹಿರಿಯ ನಾಗರಿಕರು ಸಮಾಜದ ಕಣ್ಣುಗಳಿದ್ದಂತೆ ಯೌವನದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದವರು ವಯೋ ಸಹಜ ಬದಲಾವಣೆಗಳಿಂದ ತಮ್ಮದೇ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗದ ಮಟ್ಟಕ್ಕೆ ತಲುಪುತ್ತಾರೆ. ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೈ ನಡುಕ, ಮಂದ ದೃಷ್ಟಿ, ವಯೋ ಸಹಜ ಕಾಯಿಲೆಗಳಿಗೆ ಹೊಂದಾಣಿಕೆ ಮುಂತಾದ ಸಮಸ್ಯೆಗಳೊಂದಿಗೆ, ಅವರು ತಮ್ಮ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಕಷ್ಟವಾಗಿದೆ ಈ ಹಿನ್ನೆಲೆಯಲ್ಲಿ ದೀರ್ಘಾಯು ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ದೀರ್ಘಾಯು ಯೋಜನೆಯ ನೋಡಲ್ ಸಂಸ್ಥೆ ಭರಿತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಭಾರತಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net