ಹುಬ್ಬಳ್ಳಿ: ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಬೇಡಿಕೆಗಳ ಕುರಿತು ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘವು ರಾಜ್ಯ ಸರ್ಕಾರದ ಬಜೆಟ್ ಪೂರ್ವ ಸಭೆಯಲ್ಲಿ ಮಂಡಿಸಿದೆ ಎಂದು ಅಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದ್ದಾರೆ.
ಈ ಮೊದಲು ಬೃಹತ್ ಮೆರವಣಿಗೆ, ಸಭೆ, ಸಮಾರಂಭಗಳನ್ನು ಏರ್ಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೀಗ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನಿರ್ದೇಶನಾಲಯದಿಂದ ಕಳೆದ ವಾರ ಆಯೋಜಿಸಿದ್ದ ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಲಾಗಿದೆ.
ಎಲ್ಲ ಹಿರಿಯ ನಾಗರಿಕರಿಗೆ ಉಚಿತ್ ಬಸ್ ಪ್ರಯಾಣ, ವೃದ್ಧಾಪ್ಯವೇತನ ವಾರ್ಷಿಕ ಆದಾಯ ಮಿತಿಯನ್ನು 1.20 ಲ ರೂ.ಗೆ ಹೆಚ್ಚಿಸುವದು, ತಡೆ ಹಿಡಿದ ಎಲ್ಲ ವೃದ್ಧಾಪ್ಯವೇತನ ತಕ್ಷಣ ಆರಂಭಿಸುವದು, ಮಾಸಿಕ 5 ಸಾವಿರ ರೂ. ಪಿಂಚಣಿ ನೀಡುವದು ಸೇರಿ ಹತ್ತು ಬೇಡಿಕೆಗಳನ್ನು ಸಲ್ಲಿಸಲಾಗಿದೆ.
ಅಸಂಘಟಿತ ಹಿರಿಯ ನಾಗರಿಕರ ಪಿಂಚಣಿ ಕುರಿತು ಚರ್ಚಿಸಲು ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ರಾಷ್ಟ್ರೀಯ ಸಭೆಯನ್ನು ಮಾರ್ಚ್ 3ರಂದು ಪುಣೆಯಲ್ಲಿ ಏರ್ಪಡಿಸಲಾಗಿದೆ ಎಂದು ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.