ಮೈಸೂರಿನ ಹಿರಿಯ ಕಲಾವಿದೆಗೆ 1.98 ಲಕ್ಷ ರೂ. ವಂಚನೆ

Published on

ಮೈಸೂರು: ಗೂಗಲ್‌ನಲ್ಲಿ ಸಿಕ್ಕ ನಂಬರ್‌ಗೆ ಕರೆ ಮಾಡಿದ ಹಿರಿಯ ಕಲಾವಿದೆ 1.98 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಶ್ರೀರಾಂಪುರ ಎರಡನೇ ಹಂತದಲ್ಲಿ ವಾಸವಾಗಿರುವ ಎಂ.ವಿ. ಜಮುನಾರಾಣಿ ಮಿರ್ಲೆ ಹಣ ಕಳೆದುಕೊಂಡವರು.

ಜ್ಯೋತಿಷ್ಯದ ಬಗ್ಗೆ ನಿತ್ಯಕುಂಡಲಿ ಪುಸ್ತಕ ಖರೀದಿಸುವ ಸಲುವಾಗಿ ಜಮುನಾರಾಣಿ ಅವರು ಇತ್ತೀಚೆಗೆ ಗೂಗಲ್ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಗೌರಿಶಂಕರ ಬುಕ್ ಡಿಪೋ ಹೆಸರಿನಲ್ಲಿ ಇದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ.

ಕರೆ ಸ್ವೀಕರಿಸಿದ ವ್ಯಕ್ತಿ ಮಾತನಾಡುತ್ತಲೇ ಜಮುನಾರಾಣಿ ಅವರ ಮೊಬೈಲ್‌ಗೆ ಎಪಿಕೆ ಫೈಲ್ ಕಳಿಸಿದ್ದು, ಅದು ಓಪನ್ ಆಗಿದೆ. ಇದಾಗ ಕೆಲವೇ ಕ್ಷಣಗಳಲ್ಲಿ ಇದು ಫ್ರಾಡ್ ಎಂದು ಖಚಿತವಾಗಿ ಕರೆ ಕಟ್ ಮಾಡಲು ಯತ್ನಿಸಿದರೂ ಕಟ್ ಆಗಿಲ್ಲ.

ಇದೇ ಸಮಯದಲ್ಲಿ ಇವರ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲಾಗಿದೆ ಎಂದು ಮೆಸೇಜ್ ಕೂಡಾ ಬಂದಿದೆ. ಇದರಿಂದ ಗಾಬರಿಯಾದ ಜಮುನಾರಾಣಿ ಅವರು, ಇನ್ನೂ ಮೊಬೈಲ್ ಲೈನ್‌ನಲ್ಲಿಯೇ ಇದ್ದ ವ್ಯಕ್ತಿಗೆ ಹಣ ಕಡಿತಗೊಂಡ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಆತ, ನಾನು ಹೇಳಿದಂತೆ ಮಾಡಿದರೆ ನಿಮ್ಮ ಹಣ ವಾಪಸ್ ಬರುತ್ತದೆ ಎಂದು ನಂಬಿಸಿದ್ದು, ಜಮುನಾ ರಾಣಿ ಅವರ ಮೊಬೈಲ್ ಅನ್ನು ತನ್ನ ಕಂಟ್ರೋಲ್‌ಗೆ ತೆಗೆದುಕೊಂಡು ಕೆನರಾ, ಎಸ್‌ಬಿಐ ಎರಡು ಖಾತೆಯಿಂದ ತಲಾ 99 ಸಾವಿರ ರೂ. ನಂತೆ ಒಟ್ಟು 1.98 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾನೆ.

ಎಷ್ಟೇ ಪ್ರಯತ್ನ ಪಟ್ಟರೂ ಕಾಲ್ ಮಾತ್ರ ಕಟ್ ಆಗದಿದ್ದಾಗ ಮೊಬೈಲ್ ಸ್ವಿಚ್ ಆಫ್ ಮತ್ತೆ ಆನ್ ಮಾಡಿದ ಬಳಿಕ 1930ಕ್ಕೆ ಕರೆ ವಂಚನೆ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಮೊಬೈಲ್ ಅನ್ನು ತನ್ನ ಕಂಟ್ರೋಲ್ಗೆ ತೆಗೆದುಕೊಂಡು ಫೇಕ್ ಲಿಂಕ್ ಹಾಕಿ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡ ವಂಚಕನ ವಿರುದ್ಧ ಕ್ರಮಕೈಗೊಂಡು, ಹಣ ಕೊಡಿಸುವಂತೆ ಕುವೆಂಪು ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net