

ಮಂಡ್ಯ: ಸರ್ಕಾರಿ ಆಸ್ಪತ್ರೆಗಳಿಗೆ ಜನರು ನೋವು, ಆತಂಕ, ಭಯ, ಆಸೆ, ಸಹಾಯ ಸಿಗುತ್ತೆ ಎಂಬ ನಿರೀಕ್ಷೆಯಿಂದ ಬರುತ್ತಾರೆ. ಅವರ ನಿರೀಕ್ಷೆಗೆ ಯಾವುದೇ ಕುಂದುಂಟಾಗದಂತೆ ಸೇವೆ ಒದಗಿಸುವುದು ಎಲ್ಲರ ಕರ್ತವ್ಯ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಸಲಹೆ ನೀಡಿದರು.
ನಗರದ ಮಿಮ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಂಪರ್ಕಧಿಕಾರಿ ಸಿ.ಎಂ.ಉಮೇಶ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಿಮ್ಸ್ಗೆ ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಕಡಿಮೆ ಸಂಖ್ಯೆಯ ವೈದ್ಯರು ಮತ್ತು ಸಿಬ್ಬಂದಿ ಎಲ್ಲರಿಗೂ ಸೇವೆ ಒದಗಿಸುವ ಒತ್ತಡ ಇರುತ್ತದೆ. ಇಂತಹ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೆ ಎಲ್ಲರನ್ನೂ ಸಂಬಾಳಿಸುವುದು ದೊಡ್ಡ ಕಾರ್ಯ. ಅಂತಹ ಕೆಲಸವನ್ನು ಉಮೇಶ್ ಅವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿಆರ್ಒ ಸಿ.ಎಂ.ಉಮೇಶ್, ನಾನು ಕೆಲಸಕ್ಕೆ ನಿಯೋಜನೆಗೊಂಡ ದಿನಗಳಲ್ಲಿ ಆಸ್ಪತ್ರೆಯಲ್ಲಿ ಒಳ್ಳೆಯ ಸೌಲಭ್ಯಗಳು ಇರುತ್ತಿರಲಿಲ್ಲ. ನುರಿತ ತಜ್ಞ ವೈದ್ಯರ ಕೊರತೆಯೂ ಇತ್ತು. ಇರುವ ಸೌಲಭ್ಯ ಬಳಸಿಕೊಂಡು ಸೇವೆ ನೀಡುತ್ತಿದ್ದವು. ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕೇಂದ್ರಗಳಿಗೆ ರೋಗಿಗಳನ್ನು ರವಾನಿಸಬೇಕಿತ್ತು. ಆದರೆ ಇಂದು ಸರ್ಕಾರ ಕೋಟ್ಯಂತರ ರೂ ವ್ಯಯಿಸಿ ಒಳ್ಳೆಯ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್, ಮಿಮ್ಸ್ ಪ್ರಾಂಶುಪಾಲ ಡಾ.ತಮ್ಮಣ್ಣ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ರವಿ, ಡಾ.ಸಿದ್ದೇಗೌಡ ಇತರರಿದ್ದರು.