

ಕುಶಾಲನಗರ:
ಕುಶಾಲನಗರ ತಾಲೂಕು ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಏಪ್ರಿಲ್ ಅಂತ್ಯಕ್ಕೆ ನಿವೃತ್ತರಾದ ಡಾ. ಕೆ.ಬಿ. ಬಸಪ್ಪ ಅವರಿಗೆ ಕಾಲೇಜಿನಲ್ಲಿ ಶನಿವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು. ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ, ಮೂರು ವರ್ಷ ಒಂಬತ್ತು ತಿಂಗಳು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಡಾ. ಕೆ.ಬಿ. ಬಸಪ್ಪ ನಿವೃತ್ತರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಕೆ.ಮಂಜುಳಾ ಮಾತನಾಡಿ, ಕಾಲೇಜಿನ ಪ್ರಾಂಶುಪಾಲ ಡಾ. ಬಸಪ್ಪ ಮತ್ತು ಉಪನ್ಯಾಸಕರ ಸಮನ್ವಯತೆಯಿಂದ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊAಡು ನಿವೃತ್ತಿ ಹೊಂದುತ್ತಿರುವ ಡಾ ಬಸಪ್ಪ ಅವರ ಜೀವನ ಸುಖಮಯವಾಗಿರಲಿ ಎಂದರು.
ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಪುಟ್ಟರಾಜು ಮಾತನಾಡಿ, ಪ್ರಾಂಶುಪಾಲ ಡಾ. ಬಸಪ್ಪ ಅವರು ತಮ್ಮ ಕಾಲೇಜಿನ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಕಲಿಕೆ ಬಗ್ಗೆ ಹೊಂದಿದ್ದ ಕಾಳಜಿ ಕುರಿತು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಬಸಪ್ಪ, ತಾವು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಕಾಲೇಜಿನಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಅಪರೂಪದ ಕ್ಷಣಗಳನ್ನು ಮೆಲಕು ಹಾಕಿದರು. ಈ ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕರ ತಂಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಿರತವಾಗಿ ಶ್ರಮಿಸುತ್ತಿರುವುದರಿಂದ ತಮ್ಮ ಕಾಲೇಜಿಗೆ ಪ್ರತಿ ವರ್ಷ ಉತ್ತಮ ಫಲಿತಾಂಶ ಲಭಿಸುತ್ತಿದೆ ಎಂದರು.
ಹಾಸನ ಕಾಲೇಜಿನ ಪ್ರೊ. ಸುಂದರೇಶ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್
ಮತ್ತಿತರರು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್. ವಿಜಯ್, ದಿವಾಕರ್, ಸಿ.ಜಿ. ಮಂದಪ್ಪ, ಉಪನ್ಯಾಸಕರಾದ ನಾಗಪ್ಪ ಯಾಲಕ್ಕಿಕಟ್ಟೆ, ಕಾವೇರಮ್ಮ, ಎಂ.ಟಿ. ರಮೇಶ್, ಎಂ.ಯು. ಸತೀಶ್, ಲಿನೆಟ್, ರವೀಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್, ಗ್ರಾ.ಪಂ. ಸದಸ್ಯ ಟಿ.ಪಿ. ಹಮೀದ್ ಮತ್ತಿತರರು ಇದ್ದರು.