ಪಾಕಿಸ್ತಾನಕ್ಕೆ 4 ವಿಮಾನ ಕಳುಹಿಸಿ ಬೂಟಾಟಿಕೆ

16kolar5- mla kothur manjunath
Published on

ಕೋಲಾರ: ಪಾಕಿಸ್ತಾನಕ್ಕೆ 4 ವಿಮಾನ ಕಳುಹಿಸಿ ಬೂಟಾಟಿಕೆ ಮಾಡಿದ್ದು ಬಿಟ್ಟರೆ, ಉಗ್ರರ ವಿರುದ್ಧ ಕೇಂದ್ರ ಸರ್ಕಾರ ಏನೂ ಮಾಡಲೇ ಇಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್​ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪತಿ ಕಳೆದುಕೊಂಡ ಮಹಿಳೆಯರ ಅರಿಶಿಣ ಕುಂಕುಮಕ್ಕೆ ಬೆಲೆ ಕೊಡಲಿಲ್ಲ. ಆಪರೇಷನ್​ ಸಿಂಧೂರ ಎಂದು ಹೆಸರಿಟ್ಟುಕೊಂಡರೇ ಹೊರತು, ಇವರಿಂದ ಏನೂ ಆಗಿಲ್ಲ ಎಂದು ಹೇಳಿಕೆ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಹಲ್ಗಾಮ್​ನಲ್ಲಿ ಪ್ರವಾಸಿಗರನ್ನು ಕೊಂದ ಉಗ್ರರು ಎಲ್ಲಿ ಹೋದರು?. ನಮ್ಮ ಊರಲ್ಲಿ ಬಂದು ನಮ್ಮನ್ನು ಹೊಡೆದು ತಪ್ಪಿಸಿಕೊಂಡು ಹೋಗುತ್ತಾರೆ ಎಂದರೆ ಏನರ್ಥ?. ಗಡಿಯಲ್ಲಿ ಸೇನೆ ಏನು ಮಾಡುತ್ತಿತ್ತು? ನಮ್ಮ ಭದ್ರತಾ ವೈಫಲ್ಯವೇ?, ಪಹಲ್ಗಾಮ್​ನಲ್ಲಿ ಇವರೇ ಏನಾದರೂ ಯೋಜನೆ ರೂಪಿಸಿ ಉಗ್ರರನ್ನು ಒಳಗಡೆ ಬಿಟ್ಟುಕೊಂಡರೇ ಅಥವಾ ಉಗ್ರರೇ ಖುದ್ದಾಗಿ ಬಂದರೆ? ಯಾವುದು ನಿಜ ಯಾವುದು ಸುಳ್ಳು ಒಂದೂ ನಮಗೆ ಗೊತ್ತಾಗುತ್ತಿಲ್ಲ ಎಂದರು.

ಪಾಕಿಸ್ತಾನ ಸೇರಿ ಯಾವುದೇ ದೇಶದ ಸಾಮಾನ್ಯ ಪ್ರಜೆಗಳ ಮೇಲೆ ಯುದ್ಧ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ, ನಮ್ಮ ದೇಶದೊಳಗೆ ಬಂದು ಮಕ್ಕಳು ಹಾಗೂ ಪತ್ನಿ ಎದುರೇ ಪತಿಯನ್ನು ಹೊಡೆದರೆ ಹೇಗೆ ಸಹಿಸುವುದು? ಎಂದು ಬೇಸರಿಸಿದರು.

ಉಗ್ರರನ್ನು ಬೇರಿನಿಂದಲೇ ಹೊಡೆಯಬೇಕು. ಈ ಬಾರಿ ಒಳ್ಳೆಯ ಅವಕಾಶವಿತ್ತು. ಭಾರತ ಕೊಟ್ಟ ಪ್ರತ್ಯುತ್ತರ ಸಮಾಧಾನಕರವಾಗಿಲ್ಲ. ಭಯೋತ್ಪಾದಕರು ಮತ್ತು ಭಯೋತ್ಪಾದನೆಯನ್ನು ಸದೆ ಬಡಿಯುತ್ತದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಕದನ ವಿರಾಮ ಎಂದು ಹೇಳುವ ಕೇಂದ್ರ ಸರ್ಕಾರ ಇನ್ನಾದರೂ ಇಸ್ರೇಲ್​ ನೋಡಿ ಕಲಿಯಬೇಕು ಎಂದುರು. ಇಸ್ರೇಲ್​ ಯಾರ ಮಾತೂ ಕೇಳಲ್ಲ. ರಷ್ಯಾದವರು ಉಕ್ರೇನ್​ನನ್ನು ಹೇಗೆ ಹೊಡೆದು ಸರ್ವನಾಶ ಮಾಡಿ ಬಿಟ್ಟರು? ಆದರೆ, ಇಲ್ಲಿ ನಮ್ಮ ಹೆಣ್ಣು ಮಕ್ಕಳಿಗೆ ಬೆಲೆ ಇಲ್ಲವಾಗಿದೆ. ಆ ಉಗ್ರರನ್ನ ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಕೊಡಬೇಕಿತ್ತು. ಅಮೆರಿಕದ ಒಬ್ಬ ಪ್ರಜೆಯನ್ನು ಮುಟ್ಟಿದರೆ ಅವರು ಸುಮ್ನೆ ಬಿಡುತ್ತಾರಾ ಎಂದು ಪ್ರಶ್ನಿಸಿದರು.

ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿಲ್ಲ

ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ನಡೆಯಿತು, ಹೆಣ್ಣು ಮಕ್ಕಳು, ಮಕ್ಕಳನ್ನು ನಿಲ್ಲಿಸಿಕೊಂಡು ಗಂಡಂದಿರನ್ನು ಕೊಲೆ ಮಾಡುತ್ತಾರೆ ಎಂದರೆ ಏನರ್ಥ? ನಾನೂ ಯಾರ ವಿರುದ್ಧವೂ ಆರೋಪ ಮಾಡಿಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಶುಕ್ರವಾರ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ದೇಶದಲ್ಲಿ ಪುಲ್ವಾಮಾ ದಾಳಿ ನಡೆದಾಗ ಸೈನಿಕರು ಮತಪಟ್ಟರು. ಅವರು ನಮ್ಮ ದೇಶದ ಮಕ್ಕಳಲ್ವಾ? ಆ ಸಂದರ್ಭದಲ್ಲಿ ಕಾರೊಂದು ಬಂದು ಸೈನಿಕರ ವಾಹನಕ್ಕೆ ಡಿಕ್ಕಿ ಹೊಡೆಯಿತು. ಇದಕ್ಕೆಲ್ಲ ಮೂಲ ಯಾವುದು? ಸ್ವಾತಂತ್ರ$್ಯ ಬಂದಾಗಿನಿಂದ 3, 6 ತಿಂಗಳಿಗೆ ವರ್ಷಕ್ಕೆ ನಡೆಯುತ್ತಿದ್ದರೆ ಇದಕ್ಕೆ ಕೊನೆ ಅನ್ನೊದು ಇಲ್ವಾ ಎಂದು ಪ್ರಶ್ನಿಸಿದರು.

ಜನಸಂಖ್ಯೆ, ತಂತ್ರಜ್ಞಾನ ಸೇರಿ ಎಲ್ಲ ರಂಗಗಳಲ್ಲೂ ದೇಶ ಬಲಿಷ್ಠವಾಗಿದೆ. ಅತಿ ಹೆಚ್ಚು ಸಂಬಳ ತೆಗೆದುಕೊಳ್ಳುವವರೂ ಇದ್ದಾರೆ. ಮನೆಯೊಳಗೆ ಬಂದಿದ್ದ ಕಳ್ಳರನ್ನು ಬಿಟ್ಟಿದ್ದಾರೆ. ಅವರನ್ನು ಹಿಡಿದುಕೊಂಡು ಸರಿಯಾದ ರೀತಿ ತನಿಖೆ ನಡೆಸಿದ್ದರೆ ಕಾರಣ ಏನು ಎಂಬುದು ಗೊತ್ತಾಗುತ್ತಿತ್ತು. ದೇಶ ಬಿಟ್ಟು ಹೊರ ಹೋಗಲು ಏರ್​ ಪೋರ್ಟ್​ಗಳಲ್ಲಿ ಗುಪ್ತಚರ ಇಲಾಖೆ ಇಷ್ಟೊಂದು ವಿಲವಾಗಿದೆಯಾ ಎಂದು ಪ್ರಶ್ನಿಸಿದರು.

ಶ್ರೀಲಂಕಾಗೆ ಓಡಿ ಹೋದವರು ಅಲ್ಲಿಯೂ ಮೂವರನ್ನು ಹೊಡೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ದೇಶದ ಆರ್ಮಿ ಬಗ್ಗೆ ಮಾತನಾಡಿಲ್ಲ. ಯಾವ ಪಕ್ಷದ ಬಗ್ಗೆಯೂ ಮಾತನಾಡಿಲ್ಲ. ನಮಗೆ ಬಿಜೆಪಿ, ಕಾಂಗ್ರೆಸ್​ ಪಕ್ಷದವರೇನು ನಿಮಗೆ, ನನಗೂ ಊಟ ಹಾಕುವುದಿಲ್ಲ. ನಮ್ಮ ಕಷ್ಟ ನಮ್ಮದು. ಸೈನಿಕರು, ಪ್ರಧಾನಿ, ರಕ್ಷಣಾ ಮಂತ್ರಿಗಳ ಬಗ್ಗೆ ಮಾತನಾಡಿಲ್ಲ. ಹಿಂದು ಹೆಣ್ಣು ಮಕ್ಕಳ ಅರಿಶಿಣ ಕುಂಕುಮ ಅಳಿಸಿ ಹೋದರಲ್ಲ ಎಂಬುದರ ಬಗ್ಗೆ ಸಾರ್ವಜನಿಕರ ಪರ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net