ನಮ್ಮನ್ನು ಊರಿಗೆ ಕಳಿಸಿ ಬಿಡಿ : ನಿರಾಶ್ರಿತ ಕೇಂದ್ರದ ವಲಸೆ ಕಾರ್ಮಿಕರ ಪಟ್ಟು

TMK- PROTEST 1
Published on

ತುಮಕೂರು: ನಿರಾಶ್ರಿತ ಕೇಂದ್ರದ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ತೆರಳಲು ಅನುವು ಮಾಡಿಕೊಡುವಂತೆ ಬುಧವಾರ ಹಾಸ್ಟೆಲ್‌ನಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿದರು. ಲಾಕ್‌ಡೌನ್ ಜಾರಿಯಾದ ಬಳಿಕ ನಗರದ ಸರ್ಕಾರಿ ವಸತಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಬುಧವಾರ ಮಧ್ಯಾಹ್ನ ಏಕಾಏಕಿ ಊರುಗಳಿಗೆ ಹೋಗಲು ಅವಕಾಶ ಕೊಡುವಂತೆ ಗುಂಪು ಗುಂಪಾಗಿ ಹೊರಗೆ ಬಂದರು.

ಇದರಿಂದ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಂದಾಯ ಇಲಾಖೆ ಅಧಿಕಾರಿ ಗಳು ಗಲಿಬಿಲಿಗೊಂಡರು. 23 ದಿನಗಳಿಂದ ಆಶ್ರಯ ಪಡೆದಿರುವ ಕಾರ್ಮಿಕರಿಗೆ ಸಾಮಾಜಿಕ ಅಂತರ, ಸ್ವಚ್ಛತೆ, ಶುಚಿತ್ವದ ಬಗ್ಗೆ ಪ್ರತಿದಿನ ತಿಳಿಹೇಳಲಾಗಿತ್ತು. ಆದರೆ, ಇದನ್ನೆಲ್ಲಾ ಗಾಳಿಗೆ ತೂರಿ, ಹಾಸ್ಟೆಲ್ ಮುಂಭಾಗ ಏಕಾಏಕಿ ವಸ್ತುಗಳೊಂದಿಗೆ ಜಮಾಯಿಸಿ, ಊರುಗಳಿಗೆ ಕಳುಹಿಸಿಕೊಡುವಂತೆ ಒತ್ತಾಯಿಸಿದರು. ಇದರಿಂದ ಅಧಿಕಾರಿಗಳು ಹಾಗೂ ಪೊಲೀಸರು ಕೆಲಕಾಲ ವಿಚಲಿತರಾದರು. ಈ ಸಂದರ್ಭದಲ್ಲಿ ನಿಮ್ಮನ್ನು ಕಳುಹಿಸಿಕೊಟ್ಟರೂ ಸಂಬಂಧಪಟ್ಟ ಜಿಲ್ಲೆಗಳಿಗೆ ಪ್ರವೇಶ ನಿಷೇಧ, ಮತ್ತೆ ಕ್ವಾರಂಟನ್‌ಗೆ ಒಳಗಾಗಬೇಕಾಗುತ್ತದೆ ಎಂದು ಮನಮೊಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡಲ್ಲಿ. ಸುದ್ದಿ ತಿಳಿದ ತಹಸೀಲ್ದಾರ್ ಮೋಹನ್ ಕುಮಾರ್ ಸ್ಥಳಕ್ಕೆ ಬಂದು ಊರುಗಳಿಗೆ ಕಳುಹಿಸಿಕೊಡುವುದಾಗಿ ಭರವಸೆಯಿತ್ತ ನಂತರ ಕಾರ್ಮಿಕರು ಹಾಸ್ಟೆಲ್ ಪ್ರವೇಶಿಸಿದರು.

ಉ.ಕ.ಕಾರ್ಮಿಕರು: ಬೆಂಗಳೂರು ಸುತ್ತಮುತ್ತ ಕೆಲಸ ಮಾಡುತ್ತಿದ್ದ ಬಹುತೇಕ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಕಾರ್ಮಿಕರು ಕಾಲ್ನಡಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿದ್ದರು. ಜಿಲ್ಲೆಯ ಗಡಿಭಾಗದ ಶಿರಾ ತಾಲೂಕಿನ ತಾವರೆಕೆರೆ ಬಳಿ ತೆರಳುತ್ತಿದ್ದ ಅವರನ್ನು ತಡೆದು ಶಿರಾದಲ್ಲೇ ನಿರಾಶ್ರಿತ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ತುಮಕೂರಿನ ಹನುಮಂತಪುರದ ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿ ನಿಲಯದಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು.

316 ವಲಸೆ ಕಾರ್ಮಿಕರು: ಕಲಬುರಗಿ, ವಿಜಯಪುರ, ರಾಯಚೂರು, ಮಂತ್ರಾಲಯ, ಯಾದಗಿರಿ ಭಾಗದ ವಲಸೆ ಕಾರ್ಮಿಕರಿಗೆ ಆಶ್ರಯ ನೀಡಲಾಗಿದ್ದು. ಈ ಪೈಕಿ 108 ಮಹಿಳೆಯರು, 24 ಮಕ್ಕಳು ಇದ್ದಾರೆ.

ಸರ್ಕಾರದ ಆದೇಶ ಬಂದ ಬಳಿಕ ನಿರಾಶ್ರಿತರ ಕೇಂದ್ರದಲ್ಲಿರುವವರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಗೆ ತೆರಳಿದರೂ ಹೋಂ ಕ್ವಾರಂಟನ್ ನಲ್ಲಿರಬೇಕೆಂಬುದನ್ನು ಕಾರ್ಮಿಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಮೋಹನ್ ಕುಮಾರ್ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net