

ಮಂಡ್ಯ: ಜ್ಞಾನಕ್ಕಿಂತ ಮಿಗಿಲಾಗಿರುವುದು ಯಾವುದು ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎಸ್.ಲೋಕೇಶ್ ಸ್ನೇಹ ಬಳಗದಿಂದ ಆಯೋಜಿಸಿದ್ದ ನಿವೃತ್ತಿ ಹೊಂದಿದ ಗಣಿತ ಪರಿವೀಕ್ಷಕ ಎಸ್.ಲೋಕೇಶ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಲೋಕೇಶ್ ಇಂದಿನ ಯುವ ಶಿಕ್ಷಕರಿಗೆ ಮಾದರಿಯಾಗಿದ್ದರು. ಇವರ ಮೇಲೆ ವಿದ್ಯಾರ್ಥಿಗಳು ಅಪಾರ ಗೌರವ ಇಟ್ಟುಕೊಂಡಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಪರ ನಿರ್ದೇಶಕ ಡಾ.ಸಿದ್ದರಾಜು ಮಾತನಾಡಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಆಗ ಮಾತ್ರ ಶ್ರೇಷ್ಟ ಶಿಕ್ಷಕನಾಗಲು ಸಾಧ್ಯ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಸಮಾಜವನ್ನು ತಿದ್ದುವ ಕೆಲಸ ಗುರುಗಳು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ವಿಜ್ಞಾನ ಮತ್ತು ಪರಿಸರ ಶಿಕ್ಷಣ ಅಕಾಡೆಮಿಯ ಡಾ.ಬಿ.ಕೆ.ಸುರೇಶ್, ನಿವೃತ್ತ ಪ್ರಾಂಶುಪಾಲ ಡಾ.ರಾಮಲಿಂಗಯ್ಯ, ನಿವೃತ್ತ ಪರಿವೀಕ್ಷಕ ಎಸ್.ಲೋಕೇಶ್, ಶಿಕ್ಷಕ ನಂಜರಾಜು, ಸುಮಾ ಲೋಕೇಶ್ ಇತರರಿದ್ದರು.