

ಮಡಿಕೇರಿ:
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ. ಮಹಾದೇವಸ್ವಾಮಿ ಅವರನ್ನು ಶಿಕ್ಷಣ ಇಲಾಖೆಯ ವತಿಯಿಂದ ಮಂಗಳವಾರ ಸನ್ಮಾನಿಸಿ ಬೀಳ್ಕೊಡಲಾಯಿತು. ಡಿಡಿಪಿಐ ಕಚೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಡಿಡಿಪಿಐ ಸಿ. ರಂಗಧಾಮಪ್ಪ ಮತ್ತು ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಶಾಲು ಹೊದಿಸಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಸಿ. ರಂಗಧಾಮಪ್ಪ, ಶಿಕ್ಷಣ ಇಲಾಖೆಯ ಸೇವೆಯು ಅನನ್ಯವಾದ ಸೇವೆ. ಇದನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಎಲ್ಲರೂ ಇಲಾಖೆಯ ಘನತೆಯನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಈ ಹಿಂದಿನ ಎರಡು ವರ್ಷಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಕೊಡಗು 4ನೇ ಸ್ಥಾನ ಗಳಿಸಿದೆ. ಇದಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮಹಾದೇವಸ್ವಾಮಿ ಅವರ ವಿಶೇಷ ಕಾಳಜಿ ಮತ್ತು ಅಧಿಕಾರಿಗಳ ಕಾರ್ಯಕ್ಷಮತೆ ಹಾಗೂ ಪ್ರೌಢಶಾಲಾ ಶಿಕ್ಷಕರು ವಹಿಸಿದ ವಿಶೇಷ ಶ್ರಮ ಕಾರಣ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಮಹಾದೇವಸ್ವಾಮಿ, ತಾವು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಎರಡು ಅವಧಿಯಲ್ಲೂ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ರಾಜ್ಯಕ್ಕೆ 4 ನೇ ಸ್ಥಾನ ಗಳಿಸಿದ್ದು ಸಂತಸ ತಂದಿದೆ ಎಂದರು. ಜಿಲ್ಲಾ ಖಜಾನ ಇಲಾಖೆಯ ಉಪ ನಿರ್ದೇಶಕ ಬಿ.ಎನ್. ರಘುನಾಥ್, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಮಾತನಾಡಿದರು.
ಡಿವೈಪಿಸಿಗಳಾದ ಎಂ.ಕೃಷ್ಣಪ್ಪ, ಸೌಮ್ಯ ಪೊನ್ನಪ್ಪ, ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್, ಮಡಿಕೇರಿ ನಗರಸಭೆಯ ಅಧ್ಯಕ್ಷೆ ಕಲಾವತಿ, ಬಿಇಓಗಳಾದ ಎಂ.ಕೃಷ್ಣಪ್ಪ, ಟಿ.ಜೆ.ಆನಂದ, ಜಿ.ಬಿ.ರಾಮಪ್ಪ, ರವಿ ಪ್ರಸನ್ನ, ನಿವೃತ್ತ ಬಿಇಓ ಬಿ.ಕೆ.ಶಿವಣ್ಣ ಮತ್ತಿತರರು ಇದ್ದರು.