ಸೇವಾ ಕಾರ್ಯಗಳಿಂದ ವೃತ್ತಿಗೆ ಗೌರವ ಹೆಚ್ಚಳ

18 Muguru 1
Published on

ಮೂಗೂರು : ಸೇವೆ ಎಂಬುದು ಶಾಲೆಗೆ ಸೀಮಿತವಾಗದೆ ಸಮಾಜದ ಇತರ ಕ್ಷೇತ್ರಗಳಿಗೂ ವಿಸ್ತರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಮೂರ್ತಿ ಹೇಳಿದರು. ಮೂಗೂರಿನ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದ ನೂತನ ಕಚೇರಿ ಉದ್ಘಾಟನೆ ಮತ್ತು ತಾಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ ವಿವಿಧ ರಂಗದಲ್ಲಿ ಮಾದರಿ ಕಾರ್ಯಗಳನ್ನು ಕೈಗೊಳ್ಳುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ನಮ್ಮ ವೃತ್ತಿಗೆ ಗೌರವವೂ ಇಮ್ಮಡಿಸುತ್ತದೆ ಎಂದರು.

ಬೋಧನಾ ವೃತ್ತಿಗೆ ಬೆಲೆ ಕಟ್ಟಲಾಗದು. ಹಲವು ಒತ್ತಡದ ನಡುವೆಯೂ ಶಿಕ್ಷಕರು, ಮುಖ್ಯ ಶಿಕ್ಷಕರು ಕೆಲಸ ಮಾಡುತ್ತಾರೆ. ಕೊನೆಯವರೆಗೂ ಸಾರ್ಥಕ ಸೇವೆ ಸಲ್ಲಿಸಿ ಇತರರಿಗೆ ಮಾದರಿಯೂ ಆಗುತ್ತಾರೆ. ಅದಕ್ಕಿಂತಾ ಮಿಗಿಲಾಗಿ ವಿದ್ಯಾರ್ಥಿಗಳ ಬದುಕು ಕಟ್ಟುವ ಕೆಲಸ ಮಾಡಿ ಇಲಾಖೆಯ ಗೌರವ ಕಾಪಾಡುವಲ್ಲಿ ಧನ್ಯತೆ ಕಾಣುತ್ತಾರೆ. ಇದು ಮಹತ್ವದ್ದು ಎಂದರು. ನಿವೃತ್ತಿಯಾದವರ ಅನುಭವಗಳು ಮುಂದಿನವರಿಗೆ ಮಾದರಿಯಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಸಲಹೆ ನೀಡಿದರು.

ನಿವೃತ್ತ ಮುಖ್ಯ ಶಿಕ್ಷಕರಾದ ಹೇಮಚಂದ್ರ ಹಾಗೂ ಚಿನ್ನಸ್ವಾಮಿ ಅವರು ಸನ್ಮಾನ ಸ್ವೀಕರಿಸಿ ತಮ್ಮ ಸೇವಾ ಅನುಭವವನ್ನು ಹಂಚಿಕೊಂಡರು. ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಪುಟ್ಟಸ್ವಾಮಿ ಹಾಗೂ ಕಾರ್ಯದರ್ಶಿ ಪ್ರಕಾಶ್ ಅವರನ್ನೂ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಉಪ ಪ್ರಾಂಶುಪಾಲ ಸಿ.ಪುಟ್ಟಸ್ವಾಮಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸಾದ್, ಇಸಿಒ ಜಗದೀಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ ರಂಗಸ್ವಾಮಿ, ಹೇಮಚಂದ್ರ, ಮಂಟೇಸ್ವಾಮಿ, ಚಿನ್ನಸ್ವಾಮಿ , ಸಿದ್ದರಾಜಪ್ಪ, ಹಾಗೂ ತಾಲೂಕಿನ ವಿವಿಧ ಪ್ರೌಢಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net