

ಅರಕಲಗೂಡು : ತಾಲೂಕಿನ ದೊಡ್ಡಮಗ್ಗೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ 21 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಡಾ. ನಮ್ರತಾ ಅವರಿಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಮಂಜು, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಅಧಿಕಾರಿಗಳಿಗೆ ಜನರಿಂದಲೇ ಗೌರವ ದೊರೆಯಯಲಿದೆ ಎಂಬುದಕ್ಕೆ ಡಾ. ನಮ್ರತಾ ಅವರೇ ದೊಡ್ಡ ನಿದರ್ಶನ ಎಂದರು.
ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರೂ ಸಹಕಾರ ನೀಡಬೇಕು ಎಂದರು.
ಅಭಿಮಾನವೇ ದೊಡ್ಡ ಪ್ರಶಸ್ತಿ : ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಡಾ. ನಮ್ರತಾ, ದೊಡ್ಡಮಗ್ಗೆ ಆಸ್ಪತ್ರೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಲು ಗ್ರಾಮಸ್ಥರು, ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಹಕಾರವೇ ಕಾರಣ ಎಂದರು. ನನ್ನ ಸೇವಾ ವೃತ್ತಿಯಲ್ಲಿ ಇರುವತನಕ ಈ ಭಾಗದ ಜನರನ್ನು ಮರೆಯುವುದಿಲ್ಲ. ಉತ್ತಮ ಸೇವೆ ನೀಡಿದ್ದೇನೆ ಎಂಬುದಕ್ಕೆ ಗ್ರಾಮಸ್ಥರು ನೀಡಿದ ಈ ಗೌರವವೇ ಸಾಕ್ಷಿಯಾಗಿದೆ. ಜನರ ಆತ್ಮೀಯತೆ ಮತ್ತು ಅಭಿಮಾನಗಳು ನನಗೆ ದೊಡ್ಡ ಪ್ರಶಸ್ತಿಯಾಗಿದೆ. ಇಂದಿನ ಕಾರ್ಯಕ್ರಮ ನನ್ನ ಬದುಕಿನಲ್ಲಿ ಅವಿಸ್ಮರಣೀಯ ಎಂದು ನುಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ಗ್ರಾಮದ ಮುಖಂಡ ಪಟೇಲ್ ರಾಜೇಗೌಡ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಅಂಜುಂ ಫರ್ಜಾನ್, ಡಾ. ಸಿಂಧು, ಜಿಪಂ ಮಾಜಿ ಸದಸ್ಯ ರವಿ ಮತ್ತು ಗ್ರಾಮಸ್ಥರು ಇದ್ದರು.