ಸಿ. ರಂಗಧಾಮಪ್ಪ ಅವರಿಗೆ ಬೀಳ್ಕೊಡುಗೆ

send off
Published on

ಮಡಿಕೇರಿ:

ವರ್ಗಾವಣೆಗೊಂಡ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಆಡಳಿತ) ಸಿ. ರಂಗಧಾಮಪ್ಪ ಅವರನ್ನು ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಡಿಡಿಪಿಐ ಕಚೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಡಿಡಿಪಿಐ ಸಿ. ರಂಗಧಾಮಪ್ಪ ಅವರನ್ನು ಕಚೇರಿ ಅಧಿಕಾರಿಗಳು, ಸಿಬ್ಬಂದಿ ವರ್ಗದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಸಿ. ರಂಗಧಾಮಪ್ಪ, ಶಿಕ್ಷಣ ಇಲಾಖೆಯ ಸೇವೆ ಅನನ್ಯವಾದ ಸೇವೆ. ಇದನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಎಲ್ಲರೂ ಇಲಾಖೆಯ ಘನತೆ ಮತ್ತು ವೃತ್ತಿಗೌರವ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಈ ಹಿಂದಿನ ಎರಡು ವರ್ಷಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಕೊಡಗು 4 ನೇ ಸ್ಥಾನ ಗಳಿಸಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರ ವಿಶೇಷ ಕಾಳಜಿ ಮತ್ತು ಪರಿಶ್ರಮ ಕೂಡ ಕಾರಣವಾಗಿದೆ.

ಪ್ರಸಕ್ತ ಸಾಲಿನಲ್ಲಿ ಕೂಡ ಜಿಲ್ಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಉತ್ತಮ ಯೋಜನೆಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಅವಿರತ ಶ್ರಮ ವಹಿಸಬೇಕಿದೆ ಎಂದರು.

ಕೂಡಿಗೆ ಡಯಟ್ ಪ್ರಾಂಶುಪಾಲ ಡಿ. ಉದಯ್ ಕುಮಾರ್ ಮಾತನಾಡಿ, ಇಲಾಖೆಯಲ್ಲಿ ಎಲ್ಲರೂ ಜತೆಗೂಡಿ ಕಾರ್ಯನಿರ್ವಹಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕಿದೆ ಎಂದು ಹೇಳಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಡಿಡಿಪಿಐ ಆಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಸುಧಾರಿಸಲು

ಡಿಡಿಪಿಐ ರಂಗಧಾಮಪ್ಪ ಕೈಗೊಂಡ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳು ಮಾದರಿಯಾದುದು ಎಂದರು. ಡಿವೈಪಿಸಿಗಳಾದ ಎಂ.ಕೃಷ್ಣಪ್ಪ, ಸೌಮ್ಯ ಪೊನ್ನಪ್ಪ, ನಿವೃತ್ತ ಶಿಕ್ಷಣಾಧಿಕಾರಿ ಎಂ.ಮಹಾದೇವಸ್ವಾಮಿ ಮಾತನಾಡಿದರು.

ನೂತನ ಡಿಡಿಪಿಐ ಬಸವರಾಜು, ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್, ಜಿಲ್ಲಾ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್.ಪಲ್ಲೇದ್, ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ. ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net