ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಮೋಸ: ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಆರೋಪ

Seminar with sugarcane growers Mandya
Published on

ಮಂಡ್ಯ: ಕೋಜನ್, ಎಥನಾಲ್, ಡಿಸ್ಟಲರಿ, ಸಕ್ಕರೆ ಸೇರಿದಂತೆ ಹಲವು ಉತ್ಪಾದನೆಗಳನ್ನು ಸಕ್ಕರೆ ಕಾರ್ಖಾನೆಗಳು ಮಾಡುತ್ತಿವೆ. ಇದರಿಂದ ಲಾಭ ಗಳಿಸುತ್ತಿದ್ದರೂ ಸರಿಯಾದ ಬೆಲೆಯನ್ನು ರೈತರಿಗೆ ಕೊಡುತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಆರೋಪಿಸಿದರು.

ನಗರದ ಗಾಂಧಿ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ರಾಜ್ಯ ಕಬ್ಬು ಬೆಳೆಗಾರರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಎಂದಿಗೂ ಅವರ ದುಡಿಮೆ ಲೆಕ್ಕ ಹಾಕುವುದಿಲ್ಲ. ಸಾಲ ಮಾಡಿ ಕಬ್ಬು ಬೆಳೆದ ರೈತರು ಹಾಕಿದ ಲಾಭವೇ ಇಲ್ಲ. ಏಕೆಂದರೆ ಕಾರ್ಖಾನೆಗಳು ನೀಡುವ ಬೆಲೆಯು ಖರ್ಚು ಇರಲಿ ಅದರ ಬಡ್ಡಿಗೂ ಸಾಲುತ್ತಿಲ್ಲ. ಸಕ್ಕರೆ ಎಷ್ಟು ಅಂಶ ಇದೆ ಎನ್ನುವುದನ್ನು ಸರ್ಕಾರ ಖುದ್ದಾಗಿ ಪರಿಶೀಲನೆ ಮಾಡಿದರುವುದರಿಂದ ಕೇಂದ್ರ ಸರ್ಕಾರ ನಿಗದಿ ಪಡಿಸಿದಂತೆ ಎಫ್‌ಆರ್‌ಪಿ ಬೆಲೆ ನೀಡದೇ ಕಬ್ಬು ಬೆಳೆದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಮೋಸ ಮಾಡುತ್ತಿವೆ. ಇದನ್ನು ಮನಗಂಡು ಬೆಲೆ ನೀಡುವುದು ಮುಖ್ಯವಾಗಬೇಕು ಎಂದು ಆಗ್ರಹಿಸಿದರು.

ಪ್ರಸ್ತುತದಲ್ಲಿ ಮಂಡ್ಯ ಜಿಲ್ಲೆಯನ್ನು ನೋಡಿದರೆ ಅಡಿಕೆ ಬೆಳೆ ಬೆಳೆಯಲು ಪ್ರಾಮುಖ್ಯತೆ ನೀಡುತ್ತಿರುವುದು ಗೊತ್ತಾಗುತ್ತಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದನ್ನು ನಾವು ನೋಡಬೇಕು. ಏಕೆಂದರೆ ಅಡಿಕೆ ಬೆಳೆ ಏನೂ ಆಹಾರದ ಬೆಳೆಯಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆ. ಕೇಂದ್ರ ಸರ್ಕಾರವು ಕಬ್ಬಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಒಂದು ಟನ್ ರಸಗೊಬ್ಬರನ್ನು ಒಂದು ಎಕರೆ ಜಮೀನಿಗೆ ಹಾಕುತ್ತಿದ್ದೇವೆ. ಇದರಲ್ಲಿ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ನೀಡುತ್ತಿದೆ ಎಂದರು.

ಫರ್ಟಿಲೈಸರ್‌ಗಳನ್ನು ಮುಕ್ತವಾಗಿ ಮಾರುಕಟ್ಟೆಗೆ ಬಿಡಿ, ಕಾರ್ಖಾನೆಗಳಿಗೆ ಕಬ್ಬು ಸರಬಾರಾಜು ಮಾಡಿರುವ ಪ್ರತಿ ಒಂದು ಟನ್‌ಗೆ ಸಬ್ಸಿಡಿ ಹಣದ ರೂಪದಲ್ಲಿ ಹಣ ನೀಡಿ, ಆಗ ಫರ್ಟಿಲೈಸರ್‌ಗಳಿಗೆ ಸಾವಿರಾರು ರೂಪಾಯಿ ಹಣ ಏಕೆ ನೀಡ ಬೇಕೆಂದು ಸಾವಯವ ಬೆಳೆ ಬೆಳೆಯಲು ರೈತರು ಮುಂದಾಗುತ್ತಾರೆ, ಆಗ ರಸಗೊಬ್ಬರದ ಮೇಲೆ ಅವಲಂಬಿತರಾಗಿರುವುದು ಕ್ರಮೇಣ ಕಡಿಮೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಉತ್ತರ ಪ್ರಾಂತ್ಯದ ಅಧ್ಯಕ್ಷ ಶಿವಣ್ಣ ಸರ್ದಾರ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಮಹಿಳಾ ಮೋರ್ಚಾದ ಪುಟ್ಟಮ್ಮ, ವಿವೇಕ್ ಮೋರೆ, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ ಬೂದನೂರು, ಕಾರ್ಯದರ್ಶಿ ಜೆ.ಕೆ.ಬಸವರಾಜು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net