ಕನ್ನಡ ಉಳಿಸಲು ಸರ್ಕಾರ ಚಿಂತನೆ ನಡೆಸಲಿ: ಸಾಹಿತಿ ಕೆ.ಪಿ.ಮೃತ್ಯುಂಜಯ ಹೇಳಿಕೆ

Seminar programme Mandya
Published on

ಮಂಡ್ಯ: ರಾಜ್ಯದಲ್ಲಿ ಕನ್ನಡ ಭಾಷೆ ಮಾತನಾಡುವುದು ಹೆಚ್ಚು ಮಂಡ್ಯ ಜಿಲ್ಲೆಯಲ್ಲಿ ಮಾತ್ರ. ಆದರೆ ಇಲ್ಲಿಯೂ ಇನ್ನೈದು ವರ್ಷದಲ್ಲಿ ಕನ್ನಡವನ್ನು ಹುಡುಕುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಾಹಿತಿ ಕೆ.ಪಿ.ಮೃತ್ಯುಂಜಯ ಆತಂಕ ವ್ಯಕ್ತಪಡಿಸಿದರು.

ನಗರದ ಡಿ.ದೇವರಾಜು ಅರಸು ಭವನದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಘಟಕ-1ರ ಸಹಯೋಗದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಏಕೀಕರಣ ಚಳವಳಿ ಒಂದು ಅವಲೋಕನ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಶಾಲೆಗೆ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಇನ್ನಾದರೂ ಸರ್ಕಾರಗಳು ಚಿಂತನೆ ನಡೆಸಿ ಸಾವಿರಾರು ಇತಿಹಾಸವಿರುವ ಭಾಷೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲೆ ಮುಚ್ಚುವ ಮೂಲಕ ಕನ್ನಡ ಭಾಷೆಯನ್ನು ಕೊಲ್ಲುತ್ತಿರುವುದು ಒಂದೆಡೆಯಾದರೆ, ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಏರಿಕೆ ಮಾಡುತ್ತಿರುವುದರಿಂದ ಅವರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಇದು ಕನ್ನಡಿಗರಿಗೆ ಬಲು ದೊಡ್ಡ ಆಘಾತ ತಂದೊಡ್ಡಿದೆ. ತ್ರಿಭಾಷಾ ನಡವಳಿಯನ್ನು ಕುವೆಂಪು ಅವರು ಅಂದೇ ವಿರೋಧಿಸಿದ್ದರೂ, ನಾವು ಅದನ್ನು ಅಪ್ಪಿಕೊಂಡಿದ್ದೇವೆ. ಇದರ ವಿರುದ್ಧ ಹೋರಾಟ ಮಾಡಿ ಕನ್ನಡ ಮಾತ್ರ ಉಳಿಯುವಂತೆ ಮಾಡಬೇಕಿದೆ. ಕಾವೇರಿ ಸಮಸ್ಯೆಯನ್ನು ರಾಜಕಾರಣಿಗಳು ಜೀವಂತವಿರಿಸಿ ಅದರ ಬೇಳೆ ಬೇಯಿಸಿಕೊಳ್ಳುತ್ತಿರುವಂತೆ ಕನ್ನಡ ಭಾಷೆಗೆ ಕುತ್ತು ತರುವ ಸನ್ನಿವೇಶಗಳನ್ನು ನಾವು ನೋಡುತ್ತಿದ್ದೇವೆ. ಇದನ್ನು ಬಲವಾಗಿ ವಿರೋಧಿಸುವ ಯುವ ಮನಸ್ಸುಗಳು ಹುಟ್ಟಿಕೊಳ್ಳಬೇಕು. ಜತೆಗೆ ಅದನ್ನು ಗಟ್ಟಿಯಾಗಿ ಹೋರಾಟ ಮಾಡುವುದು ಮುಖ್ಯವಾಗಬೇಕು ಎಂದರು.

ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆ ಬೆಳೆಯಬೇಕು. ಕನ್ನಡ ನನೆಗುದಿಗೆ ಬೀಳದೇ ಬದಲಿಗೆ ವೈಚಾರಿಕ ಪ್ರಜ್ಞೆ ಮೂಡುವಂತಾಗಬೇಕು. ಕರ್ನಾಟಕ ಏಕೀಕರಣ ಚಳವಳಿ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಕನ್ನಡ ಭಾಷೆ ಉಳಿವಿಗೆ ಯುವ ಸಮೂಹ ಮುಂದಾಗಬೇಕು ಎಂದು ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಬಿ.ಸಿ.ರೇಖಾ ಅವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಿಲಯ ಪಾಲಕ ಎಚ್.ಎನ್.ರವಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net