ಸ್ತ್ರೀ ಸಮಾನತೆ ಪ್ರತಿಪಾದಿಸಿದ ಡಾ.ಕಾರಂತರು...

Karantha
Published on

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅನಿಸಿಕೆ

ವಿವಿ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಡಾ. ಕೋಟ ಶಿವರಾಮ ಕಾರಂತ ಅವರು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಸಂದರ್ಭದ ಸಮಾಜದಲ್ಲಿ ಮಹಿಳಾ ಅಸಮಾನತೆ ಹೆಚ್ಚಾಗಿತ್ತು. ಹೀಗಾಗಿಯೇ ಅವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರ ಪ್ರಧಾನವಾಗಿತ್ತು. ಅವರ ಚೋಮನಗುಡಿ ಕಾದಂಬರಿಯಲ್ಲಿ ಬರುವ ಬೆಳ್ಳಿಯಂಥ ಪಾತ್ರ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ತಿಳಿಸಿದರು.

ಉಡುಪಿಯ ಅಜ್ಜರಕಾಡುವಿನಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್​ ವತಿಯಿಂದ ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಹಕಾರದಲ್ಲಿ ಜೂನ್​ 23ರಂದು ಆಯೋಜಿಸಿದ್ದ ಡಾ. ಕೋಟ ಶಿವರಾಮ ಕಾರಂತರ ಕಾದಂಬರಿಗಳಲ್ಲಿ "ಸ್ತ್ರೀ ಸಂವೇದನೆ' ಎಂಬ ವಿಶ್ವ ವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಮಹಿಳಾ ಅಸಮಾನತೆಯ ಸಂಕೀರ್ಣ ಸಮಸ್ಯೆಗಳನ್ನು ಕಾರಂತರು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದರು.

ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸ್ಥಾಪಕ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ ಕಾರಂತರು ನೀಡಿದ್ದ ಮಾರ್ಗದರ್ಶನವನ್ನು ಸ್ಮರಿಸಿದರು.

ಖ್ಯಾತ ಲೇಖಕಿ ಮತ್ತು ಭಾಷಾಂತರ ತಜ್ಞೆ ಡಾ. ಪಾರ್ವತಿ ಜಿ. ಐತಾಳ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ., ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ. ನಿಕೇತನಾ, ಟ್ರಸ್ಟ್​ನ ಸದಸ್ಯರಾದ ಚೇತನ ಕೋವಾಡಿ, ಡಾ. ಪ್ರಸಾದ ರಾವ್​, ಜಿ.ಎಂ. ಶರೀಫ್​ ಹೂಡೆ ಉಪಸ್ಥಿತರಿದ್ದರು.

ಡಾ. ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಕಾರ್ಯದರ್ಶಿ ಡಾ. ಸುಮಾ ಎಸ್​. ಪ್ರಾಸ್ತಾವಿಕವಾಗಿ ಮಾತಾನಾಡಿದರು. ಪೂರ್ಣಿಮಾ ಸುರೇಶ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್​ನ ಸದಸ್ಯ ಸತೀಶ ಕೊಡವೂರು ವಂದಿಸಿದರು.

ಇಂದಿನ ಸಮಾಜದಲ್ಲಿ ಮಹಿಳೆಯರೂ ಸಹ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ, ಈ ಹಿಂದೆ ಮಹಿಳೆಯರು ಅನುಭವಿಸುತ್ತಿದ್ದ ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಕಾರಂತರ ಸಮರ್ಥ ಬರವಣಿಗೆ ಸಹಕಾರಿಯಾಗಿದೆ. | ಅಬೀದ್​ ಗದ್ಯಾಳ. ಅಪರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net