ಕ್ಷಣಿಕ ಸುಖಕ್ಕಾಗಿ ದುಶ್ಚಟಗಳ ದಾಸ್ಯ ಬೇಡ...

Seminar Lead
Published on

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕಿವಿಮಾತು

ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಅಲ್ಲದೆ, ಮಾರಣಾಂತಿಕ ಕಾಯಿಲೆಗೆ ಬಲಿಯಾಗಬೇಕಾಗುತ್ತದೆ. ಯುವ ಸಮುದಾಯ ಅದರಲ್ಲೂ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕಿವಿಮಾತು ಹೇಳಿದರು.

Seminar-2
ಉಡುಪಿ ತಾಲೂಕಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಕರ್ನಾಟಕ ರಾಜ್ಯ

ಮದ್ಯಪಾನ ಸಂಯಮ ಮಂಡಳಿ ಹಾಗೂ ಕಾಲೇಜಿನ ಯುವ ರೆಡ್​ಕ್ರಾಸ್​ ಘಟಕದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕುಟುಂಬಕ್ಕೂ ಅಗೌರವ

Seminar-4
ಜಿಪಂ ಸಿಇಒ ಪ್ರತೀಕ್​ ಬಾಯಲ್​ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ ಆರೋಗ್ಯ, ಮನೋಭಾವನೆ, ಚಿಂತನೆಗಳು ಅವರ ಸ್ಥಿಮಿತದಲ್ಲಿ ಇರುವುದಿಲ್ಲ. ವ್ಯಕ್ತಿಯ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಹದಗೆಡುತ್ತದೆ. ಸಮಾಜದಲ್ಲಿ ಯಾರೂ ಸಹ ಗೌರವ ಭಾವನೆಯಿಂದ ನೋಡುವುದಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ. 60ರಷ್ಟು ಯುವ ಸಂಪತ್ತು ಇದ್ದು, ವ್ಯಸನಗಳನ್ನು ಬಿಟ್ಟು ದೇಶದ ಪ್ರಗತಿ ಉನ್ನತಗೊಳಿಸಲು ಕಾರಣೀಕರ್ತರಾಗಬೇಕು ಎಂದರು.

ಉಡುಪಿ ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ. ವಾಸುದೇವ್​ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ರಾಮರಾವ್​ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್​ ಅಧ್ಯಕ್ಷತೆ ವಹಿಸಿದ್ದರು.

Seminar- 3
ಭಾರತೀಯ ರೆಡ್​ಕ್ರಾಸ್​ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಗಿರೀಶ್​ ನಾವಡ ಹಾಗೂ ತಂಡದವರು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಸಂಗೀತ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತೆಂಕನಿಡಿಯೂರು ಕಾಲೇಜಿನ ರೆಡ್​ಕ್ರಾಸ್​ ಘಟಕದ ಸಂಚಾಲಕ ಪ್ರಶಾಂತ್​ ಎನ್​. ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಇಲಾಖೆಯ ಸಿಬ್ಬಂದಿ ಸುಚಿತ್ರಾ ವಂದಿಸಿದರು.

ಯುವಜನರು ಅರಿವಿಲ್ಲದೆ ಮಾದಕ ವಸ್ತುಗಳಿಗೆ ಬಲಿಯಾಗಿ ಅವುಗಳ ಸುಳಿಯಿಂದ ಹೊರಬರಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳು ಕಂಡುಬಂದಲ್ಲಿ ಶಿಕ್ಷಕರು ಅಥವಾ ಪೊಲೀಸ್​ ಇಲಾಖೆಗೆ ಮಾಹಿತಿ ನೀಡುವುದು ಸೂಕ್ತ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸ್​ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯ ಕೈಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ಶಿಕ್ಷಣ, ರೈಲ್ವೆ, ಅಂಚೆ ಸೇರಿದಂತೆ ಇನ್ನಿತರ ಇಲಾಖೆಗಳೂ ಕೈಜೋಡಿಸಿವೆ. ಶಿಕ್ಷಕರೂ ಸಹ ಸೂಕ್ಷ್ಮವಾಗಿ ತಮ್ಮ ವಿದ್ಯಾರ್ಥಿಗಳ ಚಲನವಲನ ಪರಿಶೀಲಿಸಬೇಕು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net