ಮಾದಕ ವಸ್ತುಗಳ ಸೇವನೆಯಿಂದ ದೂರವಿರಲಿ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಸಲಹೆ

Seminar on the ill effects of drugs Mandya
Published on

ಮಂಡ್ಯ: ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಯುವ ಜನರು ದೂರವಿದ್ದು, ಆರೋಗ್ಯಯುತ ಸಮಾಜ ನಿರ್ಮಾಣದ ಜತೆಗೆ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ತಿಳಿಸಿದರು.

ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಮಂಡ್ಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಗುರುವಿನ ಮೇಲೆ ಭಕ್ತಿ ಇಲ್ಲದಿದ್ದರೆ ನಿಮ್ಮ ಬಳಿ ಎಷ್ಟೇ ವಿದ್ವತ್ ಇದ್ದರೂ ಫಲವಿಲ್ಲ. ಭಾರತ ಯುವ ಸಮೂಹ ಮತ್ತು ಯುವಶಕ್ತಿ ಹೊಂದಿರುವ ದೇಶ. ದೇಶವನ್ನು ಅಭಿವೃದ್ಧಿಯತ್ತ ಕರೆದೊಯ್ಯುವ ಜವಬ್ದಾರಿ ಯುವ ಜನತೆಯ ಮೇಲಿದೆ. ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಕುಟುಂಬ ಕಲ್ಯಾಣ ಹಾಗೂ ಸಾಮಾಜಿಕ ಏಳಿಗೆಗಾಗಿ ಶ್ರಮಿಸಬೇಕಿದೆ. ಭಾರತದ ಸಂವಿಧಾನದ ಆಶಯವನ್ನು ನಮ್ಮಲ್ಲಿ ಅಳವಡಿಸಿಕೊಂಡು ಮುಂದೆ ಸಾಗೋಣ ಎಂದು ತಿಳಿಸಿದರು.

ದುಶ್ಚಟದಿಂದ ನಾವು ದೂರ ಇದ್ದರೆ ಸಾಲದು. ನಮ್ಮ ಸುತ್ತಮುತ್ತ ಇರುವ ಜನರಿಗೆ ಮದ್ಯ ವ್ಯಸನದಿಂದ ಉಂಟಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಬೇಕು. ದುಶ್ಚಟಗಳಿಂದ ದೂರ ಉಳಿದಾಗ ವೈಯಕ್ತಿಕ ಅಭಿವೃದ್ಧಿ ಕಾಣಬಹುದು ಇದರಿಂದ ಕುಟುಂಬ ಅಭಿವೃದ್ಧಿಗೊಳ್ಳುತ್ತದೆ ಜೋತೆ ದೇಶದ ಅಭಿವೃದ್ಧಿಗೂ ಸಹಕಾರಿಸಿದಂತಾಗುತ್ತದೆ, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಸಾಮಾಜಿಕ ಹೊಣೆಗಾರಿಕೆಯನ್ನು ಪಾಲಿಸಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ, ವಿದ್ಯಾರ್ಥಿಗಳು ಮದ್ಯ ವ್ಯಸನ ಹಾಗೂ ದುಶ್ಚಟಗಳಿಂದ ದೂರವಿರಬೇಕು. ಇತ್ತೀಚಿನ ದಿನಗಳಲ್ಲಿ ಯುವ ಜನತೆ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಯುವ ಸಮೂಹಕ್ಕೆ ತನ್ನದೇ ಆದ ಜವಾಬ್ದಾರಿಗಳಿವೆ. ಆದ್ದರಿಂದ ಕ್ಷಣದ ಸಂತೋಷಕ್ಕಾಗಿ ಜೀವನದ ಸಂತೋಷ ಹಾಳು ಮಾಡಿಕೊಳ್ಳದಿರಿ ಎಂದರು.

ಮಿಮ್ಸ್ ಮನೋರೋಗ ತಜ್ಞ ಡಾ.ಮೇಜರ್ ಕುಮಾರ್ ಮಾತನಾಡಿ, ದುಶ್ಚಟಗಳು ವ್ಯಕ್ತಿಗೆ ಕುತೂಹಲದಿಂದ ಉಂಟಾಗಬಹುದು. ಅಥವಾ ನಮ್ಮ ಸುತ್ತಮುತ್ತಲಿನ ಪರಿಸರದ ಪ್ರಭಾವದಿಂದಾಗುವ ಸಾಧ್ಯತೆ ಇದೆ. ಇನ್ನೂ ಕೆಲವೂಮ್ಮೆ ಅನುವಂಶೀಯತೆಯಿಂದಲೂ ಉಂಟಾಗಬಹುದು. ಅದರಲ್ಲೂ ಯೌವನ ಹಂತದಲ್ಲಿರುವವರು ವೇಗವಾಗಿ ದುಶ್ಚಟಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಇಲಾಖೆ ಮನಃಶಾಸ್ತ್ರಜ್ಞ ಮಹಮದ್ ಸೋಹಿಲ್ ಮಾತನಾಡಿ, ವ್ಯಸನ ಮುಕ್ತವಾಗಿರಲು ಅರಿವು ಮುಖ್ಯ. ದುಶ್ಚಟಗಳಿಗೆ ಬಲಿಯಾಗುವ ಮೊದಲು ಅಂತಹ ಅಭ್ಯಾಸಗಳಿಂದ ದೂರ ಇರುವುದು ಉತ್ತಮ. ಇಂತಹ ಚಟದಿಂದ ಅಪಾಯ ಮತ್ತು ಹಾನಿಯ ಸಂಭವ ಹೆಚ್ಚು ಎಂದರು.

ಸಭೆಯಲ್ಲಿ ಮಂಡ್ಯ ವಿವಿ ಕುಲಸಚಿವ(ಪರೀಕ್ಷಾಂಗ) ಯೋಗಾನರಸಿಂಹಚಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಕಾರ್ಯಕ್ರಮ ಅಧಿಕಾರಿ ಡಾ.ಗಿರೀಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ತಿಮ್ಮರಾಜು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net