

ಶ್ರೀವಿಜಯ ಪ್ರಧಾನ ವೇದಿಕೆ: ಮಾಧ್ಯಮವನ್ನು ಪ್ರಜಾಪ್ರಭುತ್ವದ ಕಾವಲುನಾಯಿ ಎಂದೇ ಕರೆಯಲಾಗಿದೆ. ತಪ್ಪು, ಅನ್ಯಾಯ, ಅನಾಚಾರಗಳ ವಿರುದ್ಧ ದನಿ ಎತ್ತಿ ನೊಂದವರ, ಜನಸಾಮಾನ್ಯರ, ಶೋಷಿತರ ದನಿಯಾಗಬೇಕು ಮತ್ತು ಅನಾರೋಗ್ಯಕರ ಸ್ಪರ್ಧೆಯನ್ನು ಬದಿಗಿರಿಸಿ, ಗುಣಾತ್ಮಕ ವಿಕಾಸಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಮಹತ್ವದ ಸಂದೇಶವನ್ನು ಸಾಹಿತ್ಯ ಸಮ್ಮೇಳನದ ಮಾಧ್ಯಮ ಸವಾಲುಗಳು ಗೋಷ್ಠಿ ರವಾನಿಸಿತು.
ಟಿ.ವಿ. ಸುದ್ದಿವಾಹಿನಿಗಳು ಬಂದಮೇಲೆ ಪತ್ರಿಕೆಗಳ ಭವಿಷ್ಯ ಮುಗಿಯಿತು ಎಂದೇ ಭಾವಿಸಲಾಗಿತ್ತು. ಸಾಮಾಜಿಕ ಮಾಧ್ಯಮಗಳ ಅಬ್ಬರ ಹೆಚ್ಚಾದಾಗಲೂ ಇದೇ ಬಗೆಯ ಅಭಿಪ್ರಾಯ ಕೇಳಿಬಂತು. ಆದರೆ, ಈ ಎಲ್ಲ ಸವಾಲುಗಳ ನಡುವೆಯೇ ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡಿದೆ, ದಿನದಿಂದ ದಿನಕ್ಕೆ ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಹೆಚ್ಚುತ್ತಿದೆ, ಅಂಕಿ-ಸಂಖ್ಯೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹೇಳಿದರು.
ಮುದ್ರಣ ಮಾಧ್ಯಮದ ಸವಾಲುಗಳ ಬಗ್ಗೆ ಅವರು ಮಾತನಾಡಿ, ಮುದ್ರಣ ಕಾಗದದ (ನ್ಯೂಸ್ ಪ್ರಿಂಟ್) ಮೇಲೆ ಸರ್ಕಾರ ತೆರಿಗೆ ಹಾಕಿದೆ. ಇತ್ತೀಚಿನ ಬಜೆಟ್ನಲ್ಲಿ ಈ ತೆರಿಗೆಯನ್ನು ಶೇ.10ಕ್ಕೆ ಇಳಿಕೆ ಮಾಡಲಾಗಿದೆ. ಆದರೂ, ಪತ್ರಿಕೆಗಳ ಸಂಕಷ್ಟ ಕಡಿಮೆಯಾಗಿಲ್ಲ. 100 ಕೋಟಿ ಮೌಲ್ಯದ ಮುದ್ರಣ ಕಾಗದ ಆಮದು ಮಾಡಿಕೊಂಡರೆ 10 ಕೋಟಿ ರೂ. ತೆರಿಗೆ ಪಾವತಿಸುವ ದುಸ್ಥಿತಿ ಇದೆ. ಹಾಗಾಗಿ, ಈ ತೆರಿಗೆಯನ್ನು ರದ್ದು ಮಾಡಬೇಕು ಎಂದು ಸಮ್ಮೇಳನ ವೇದಿಕೆ ಮೂಲಕ ಸರ್ಕಾರವನ್ನು ಆಗ್ರಹಿಸಿದರು.
ಪತ್ರಿಕೆ ಕೊಂಡು ಓದಿ!: ಕರ್ನಾಟಕದ ನೆರೆ ರಾಜ್ಯಗಳಲ್ಲಿ ಪತ್ರಿಕೆಗಳ ಪ್ರಸರಣ ಸಂಖ್ಯೆ ಹೆಚ್ಚಿದೆ. ನಮ್ಮ ರಾಜ್ಯದಲ್ಲಿ ಒಂದು ಪತ್ರಿಕೆಯನ್ನೇ 10-15 ಜನ ಓದುತ್ತಾರೆ. ಹಾಗಾಗಿ, ಪತ್ರಿಕೆಯನ್ನು ಕೊಂಡು ಓದುವವರ ಸಂಖ್ಯೆ ಹೆಚ್ಚಬೇಕು, ಪತ್ರಿಕೆ ಹಾಕಿಸಿಕೊಳ್ಳುವವರು ಸಕಾಲಕ್ಕೆ ಬಿಲ್ ಪಾವತಿಸಬೇಕು ಎಂದರು.
ಎರಡು ಗಂಟೆ ವಿಳಂಬ: ಮಧ್ಯಾಹ್ನ 12.30ಕ್ಕೆ ಆರಂಭವಾಗಬೇಕಿದ್ದ ಮಾಧ್ಯಮಗೋಷ್ಠಿ ದೀರ್ಘ ಕವಿಗೋಷ್ಠಿ ಮತ್ತು ಆಯೋಜಕರ ನಿರ್ಲಕ್ಷ್ಯದಿಂದ ಎರಡು ಗಂಟೆ ತಡವಾಗಿ ಆರಂಭವಾಯಿತು.
ವಿಶ್ವಾಸಾರ್ಹತೆ, ಭಾಷೆ ಸವಾಲು
ಎಲ್ಲ ಮಾಧ್ಯಮಗಳ ಪ್ರಮುಖ ಸವಾಲು ಭಾಷೆ ಮತ್ತು ವಿಶ್ವಾಸಾರ್ಹತೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ, ಪರಿಣಾಮಕಾರಿಯಾಗಿ ಬೋಧಿಸದಿದ್ದರೆ ಮುಂದಿನ ವರ್ಷಗಳಲ್ಲಿ ಮಾಧ್ಯಮಗಳೂ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಹೇಳಿದರು.
ಮೊಬೈಲ್ ಕೂಡ ದೊಡ್ಡ ಸವಾಲು. ಬೆರಳತುದಿಯಲ್ಲಿ ಮಾಹಿತಿ ಸಿಗುತ್ತಿರುವಾಗ ಜನರು ಪತ್ರಿಕೆ ಓದುವಂತೆ, ಟಿ.ವಿ. ನೋಡುವಂತೆ ಮಾಡುವುದು ಸವಾಲಾಗಿದೆ ಎಂದರು. ದೃಶ್ಯ-ಶ್ರಾವ್ಯ ಮಾಧ್ಯಮದ ಬಗ್ಗೆ ಮಾತನಾಡಿದ ಪತ್ರಕರ್ತ ರಮಾಕಾಂತ ಎ.ಎಸ್., ಬಿಳಿಯಾನೆಯಂತಾಗಿರುವ ಸುದ್ದಿ ವಾಹಿನಿಗಳ ಖರ್ಚು ನಿಭಾಯಿಸುವುದೇ ಕಷ್ಟವಾಗಿದೆ. ಹಾಗಾಗಿ, ಸರಾಸರಿ ಎರಡು ವರ್ಷಕ್ಕೊಮ್ಮೆ ಹಲವು ಚಾನಲ್ಗಳು ಬಾಗಿಲು ಹಾಕುತ್ತಿವೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿಗಿಂತಲೂ ವಿವಾದಾತ್ಮಕ ಸಂಗತಿಗಳನ್ನು ತೋರಿಸಿದಾಗ ರೇಟಿಂಗ್ ಜಾಸ್ತಿ ಆಗುತ್ತದೆ. ಈ ವೈರುಧ್ಯಕ್ಕೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗಿದೆ ಎಂದರು.
ಹಿರಿಯ ಪತ್ರಕರ್ತ ಸುಭಾಷ್ ಹೂಗಾರ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದ ಉಪಯೋಗವೂ ಅನನುಕೂಲವೂ ಆಗಿದೆ. ಭಾರತದಲ್ಲಿ 40 ಕೋಟಿ ಜನ, ಪ್ರಪಂಚದಾದ್ಯಂತ 350 ಕೋಟಿ ಜನ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ತಪ್ಪು ಮಾಹಿತಿಗಳನ್ನು ತಡೆಯುವುದು ಸವಾಲಾಗಿದ್ದು, ಫ್ಯಾಕ್ಟ್ ಚಕ್ಕಿಂಗ್ ಸಿಸ್ಟಮ್ಳು ಹೆಚ್ಚಬೇಕಿದೆ ಎಂದರು.
ಗುಣಾತ್ಮಕ ಬದಲಾವಣೆಗೆ ಕೆಲಸ
ಕ್ರಿಯಾತ್ಮಕ, ಗುಣಾತ್ಮಕ, ವಿಷಯಾತ್ಮಕವಾಗಿ ಗುಣಮಟ್ಟದಿಂದ ಕಾರ್ಯನಿರ್ವಹಿಸಿದಲ್ಲಿ ಬದಲಾವಣೆ ಅಸಾಧ್ಯವೇನಲ್ಲ. ವ್ಯವಹಾರಿಕ ಕಷ್ಟ-ನಷ್ಟ ಮಾಧ್ಯಮಕ್ಕೆ ಮಾತ್ರವಲ್ಲ, ಎಲ್ಲ ವಲಯಗಳಿಗೂ ಇದೆ. ಆದರೆ, ಸಾಂಸ್ಥಿಕ ಮಾಧ್ಯಮಗಳು ತಮ್ಮ ಜವಾಬ್ದಾರಿ ಮರೆತಾಗ ಸಮಸ್ಯೆ ಸೃಷ್ಟಿಯಾಗುತ್ತದೆ. ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಹೇಳಿದರು.
ಕರ್ನಾಟಕದಲ್ಲಿ ಪತ್ರಿಕೆ ಬೆಲೆ ತುಂಬ ಕಡಿಮೆ ಇದೆ. ಹಾಗಾಗಿ, ಪತ್ರಿಕೆ ಕೊಳ್ಳಲು ಜುಗ್ಗತನ ಬೇಡ. ಮನೆಗೊಂದು, ಕಚೇರಿ ಗೊಂದು ಪತ್ರಿಕೆ ತರಿಸಿಕೊಳ್ಳಿ. ನೆರೆ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕದಲ್ಲಿ ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚಬೇಕಿದೆ. | ಕೆ.ಎನ್.ಚನ್ನೇಗೌಡ ಸಂಪಾದಕರು, ವಿಜಯವಾಣಿ