

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಸಕ್ಕರೆಯ ನಾಡು, ಅಕ್ಕರೆಯ ಬೀಡು. ನಮ್ಮ ಮಂಡ್ಯದ ಜನತೆ ಸಕ್ಕರೆಯಂತೆ ಸಿಹಿ ಹೃದಯದವರು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.
ಶ್ರೀರಂಗವೇದಿಕೆಯಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸ್ಥಿತಿ-ಗತಿ ಮತ್ತು ರೈತರ ಸಂಕಷ್ಟ ಕುರಿತು ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟಿನ ನಿರ್ಮಾಣದ ನಂತರ ಕಬ್ಬು ಬೆಳೆಯಲ್ಲಿ ಮಂಡ್ಯ ಒಂದು ಹೊಸ ಆಯಾಮವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ. ಮಂಡ್ಯ ಸಕ್ಕರೆ ಕಾರ್ಖಾನೆ ನಿರ್ಮಾಣವಾದ ಬಳಿಕ ಅನೇಕ ಉಪ ಕಾರ್ಖಾನೆಗಳು ಪ್ರಾರಂಭವಾದವು ಎಂದು ತಿಳಿಸಿದರು.
ರೈತರು ಕಬ್ಬು ಬೆಳೆಯಲು ಮಾಡುವ ವೆಚ್ಚಕ್ಕೆ ತಕ್ಕಂತಹ ಪ್ರತಿಫಲ, ಲಾಭ ದೊರೆಯುತ್ತಿಲ್ಲ. ರೈತರಿಗೆ ಬೆಲ್ಲವಿಲ್ಲವಾದರೆ ಜೀವನವಿಲ್ಲ. ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಂದ ಉಳಿಸಬೇಕಾಗಿದೆ. ದಯಮಾಡಿ ಸರ್ಕಾರ ಸಕ್ಕರೆ ಕಾರ್ಖಾನೆ ಉಳಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಯುವಕರು ಕೃಷಿ ಕಡೆ ಗಮನ ನೀಡಿ. ಸಕ್ಕರೆ ಕಾರ್ಖಾನೆ ಉಳಿವಿಗಾಗಿ ಶ್ರಮಿಸಿ ಮತ್ತು ಜನ ಪ್ರತಿನಿಧಿಗಳು ಸಕ್ಕರೆ ಕಾರ್ಖಾನೆಯ ಸಮಸ್ಯೆ ಕುರಿತು ಪ್ರಶ್ನಿಸಿ ಎಂದು ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಕರೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕು ರೈತ ಸಂಘದ ಅಧ್ಯಕ್ಷ ಶಂಭುಗೌಡ ಮಾತನಾಡಿ, ಸಕ್ಕರೆ ಕಾರ್ಖಾನೆ ರೈತರು ಹಾಗೂ ಕಾರ್ಮಿಕರದು. ಆದರೆ ಪ್ರಸ್ತುತ ರೈತರು, ಕಾರ್ಮಿಕರು ಕಾರ್ಖಾನೆ ನಮ್ಮದಲ್ಲ ಎಂಬಂತೆ ಕೆಲಸ ನಿರ್ವಹಿಸುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಮೈಶುಗರ್ ಕಾರ್ಖಾನೆ ಏಷ್ಯಾದಲ್ಲಿಯೇ ಪ್ರಸಿದ್ಧವಾದದ್ದು. ಸರ್ಕಾರ ಕಾರ್ಖಾನೆಗಾಗಿ ಪ್ರತಿ ವರ್ಷ ಕೋಟ್ಯಂತರ ರೂ ನೀಡಿದರೂ ಪ್ರಯೋಜನವಿಲ್ಲದಂತಾಗಿದೆ. ಸರ್ಕಾರವು ಉತ್ತಮ ಯೋಜನೆಯೊಂದಿಗೆ ಸಕ್ಕರೆ ಕಾರ್ಖಾನೆಯನ್ನು ಉಳಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್.ಲೋಕೇಶ್, ಕೆ.ಆರ್.ಪೇಟೆ ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗರ, ಸಮಾಜ ಸೇವಕರಾದ ಆಶಾಲತಾ ಪುಟ್ಟೇಗೌಡ, ಪುರಸಭಾ ಸದಸ್ಯ ಬಸವರಾಜು ಇತರರಿದ್ದರು.
ವಿಚಾರಗೋಷ್ಠಿಯಲ್ಲಿ ಮಂಡ್ಯದ ಕೆ.ಪಿ.ಮೃತ್ಯುಂಜಯ, ಮಳವಳ್ಳಿಯ ಮಹಾಲಿಂಗಯ್ಯ, ಪಾಂಡವಪುರದ ಡಾ.ಎಚ್.ಆರ್. ತಿಮ್ಮೇಗೌಡ, ನಾಗಮಂಗಲದ ನಾಗರಾಜು, ಮದ್ದೂರಿನ ಗೋವಿಂದ, ಕೆ.ಆರ್.ಪೇಟೆಯ ಬಿ.ಸಿ.ವಿಜಯ್‌ಕುಮಾರ್, ಜಯಕೀರ್ತಿ, ಅರಕೆರೆಯ ಸೋಮಶೇಖರ್ ಭಾಗವಹಿಸಿದ್ದರು.