

ಮಂಡ್ಯ: ಯಾರ ಮನದಲ್ಲಿ ನಂಬಿಕೆ, ಆತ್ಮವಿಶ್ವಾಸ ಮತ್ತು ಸಾಧಿಸುತ್ತೇನೆಂಬ ಧೈರ್ಯವಿರುತ್ತದೋ ಅವರು ಜೀವನದಲ್ಲಿ ಅಂದುಕೊಂಡ ಗುರಿಯನ್ನು ಸಾಧಿಸುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಾಗಬೇಕು. ಐಎಎಸ್, ಐಪಿಎಸ್ ಸೇರಿದಂತೆ ಅನೇಕ ಉನ್ನತ ಹುದ್ದೆಗಳಿಗೇರಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ ಸಲಹೆ ನೀಡಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಗುರಿ ಇಟ್ಟುಕೊಳ್ಳಬೇಕು. ಆ ಮೂಲಕ ಗಮನವನ್ನು ಗುರಿಯೆಡೆಗೆ ಕೇಂದ್ರೀಕರಿಸಿಕೊಳ್ಳಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಮ್ಮಲ್ಲಿ ಗುರಿ ಇರಬೇಕು. ಅದನ್ನು ಮುಟ್ಟಲು ಮಾತ್ರ ಗಮನವಿರಬೇಕು. ಇಲ್ಲಿ ನನಗಿಂತ ಪ್ರತಿಭಾವಂತರು ಬಂದಿದ್ದಾರೆ. ಇವರ ಮುಂದೆ ನಾನು ಪರೀಕ್ಷೆ ಬರೆದು ಯಶಸ್ವಿಯಾಗಲು ಸಾಧ್ಯವೇ ಎಂಬ ಅಳುಕು ಮನೋಭಾವ ಇರಬಾರದು. ಧೈರ್ಯದಿಂದ ಮುನ್ನುಗ್ಗುವುದು, ನಮ್ಮ ಗುರಿಯ ಮೇಲೆ ಗಮನ ಕೇಂದ್ರೀಕರಿಸಿ ಮುನ್ನಡೆದರೆ ಯಶಸ್ಸು ಒಲಿಯುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಮಂಡ್ಯ ಜಿಲ್ಲೆಯ ಯುವಕರಲ್ಲಿ ತಾಳ್ಮೆ ಬಹಳ ಕಡಿಮೆ. ಧೈರ್ಯವಿದೆ ಎಂದು ಒರಟು ಒರಟಾಗಿ ವರ್ತಿಸುವುದು ತಪ್ಪಾಗುತ್ತದೆ. ಸವಾಲುಗಳನ್ನು ಎದುರಿಸುವಲ್ಲಿ ಧೈರ್ಯವಿರಬೇಕು. ಗುರಿ ಸಾಧಿಸಬೇಕೆಂದರೆ ತಾಳ್ಮೆ ಹಾಗೂ ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯವಿದೆ ಎಂದು ಸಲಹೆ ನೀಡಿದರು.
ಎಲ್ಲ ವೃತ್ತಿಗಳಲ್ಲೂ ಸವಾಲುಗಳಿರುತ್ತವೆ. ಹಾಗಾಗಿ ಐಎಎಸ್, ಐಪಿಎಸ್ ಮಾಡುವುದೇ ಗುರಿಯಲ್ಲ. ನೂರೆಂಟು ವಿಧಗಳ ಹುದ್ದೆಗಳಿವೆ. ನಮ್ಮ ಮನೋಭಾವಕ್ಕೆ ಯಾವುದು ಸರಿ ಎನಿಸುತ್ತೊ ಅದರಲ್ಲಿ ನಾವು ಪ್ರಾವೀಣ್ಯತೆ ಸಾಧಿಸಿದರೆ ಸಮಾಜದಲ್ಲಿ ಗೌರವ ಸಿಗುತ್ತದೆ. ವಿದ್ಯಾರ್ಥಿಗಳು ಕಠಿಣ ಶ್ರಮದಿಂದಲೇ ಅಧ್ಯಯನ ಮಾಡುವುದು ಮುಖ್ಯವಾಗಬೇಕು ಎಂದು ತಿಳಿಸಿದರು.
ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಹೇಮಚಂದ್ರ ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನ ನೀಡಿದರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೂರ್ತಿ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಕುಮಾರ್, ಉಪಾಧ್ಯಕ್ಷ ಎನ್.ಮುನಿರಾಜೇಗೌಡ, ಕಾರ್ಯಾಧ್ಯಕ್ಷ ಮುನಿಕೃಷ್ಣ, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಿಳಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ಮುಖಂಡ ಎಂ.ಬೆಟ್ಟಹಳ್ಳಿ ಮಂಜುನಾಥ್ ಭಾಗವಹಿಸಿದ್ದರು.