

ಮಂಡ್ಯ: ಮಂಡ್ಯ 2015 ರಿಂದ ತಲಾದಾಯದಲ್ಲಿ ಇತರ 24 ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮುಂದಿದೆ ಎಂದು ಆಶಾ ಕಿಸಾನ್ ಸ್ವರಾಜ್ ವೇದಿಕೆಯ ಕೃಷಿ ತಜ್ಞೆ ಕವಿತಾ ಕುರುಗಂಟಿ ತಿಳಿಸಿದರು.
ನಗರದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಜಾಗೃತ ಕರ್ನಾಟಕ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ‘ಗ್ರಾಮೀಣ ಮತ್ತು ಕೃಷಿ ಪ್ರಧಾನವಾದ ಮಂಡ್ಯ ಅಭಿವೃದ್ಧಿ ಹೇಗೆ ಸಾಧ್ಯ’ ಎಂಬ ವಿಚಾರಗೋಷ್ಠಿಯಲ್ಲಿ ’ಕೃಷಿ ಪ್ರಧಾನವಾದ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯುಳ್ಳ ಪ್ರದೇಶದಲ್ಲಿ ಸುಸ್ಥಿರ ಆದಾಯ ವೃದ್ಧಿಗೆ ಇರುವ ಸಾಧ್ಯತೆಗಳು’ ಕುರಿತು ವಿಚಾರ ಮಂಡನೆ ಮಾಡಿದರು. ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ವನ್ನು ಅಭಿವೃದ್ಧಿ ಮಾನದಂಡವಾಗಿ ನೋಡಬೇಕಾಗಿಲ್ಲ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿಯೂ ಸಹ ಮಂಡ್ಯ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದ್ದು, ಹಾಗಾಗಿ ಮಂಡ್ಯ ಹೆಚ್ಚು ನಗರೀಕರಣಗೊಳ್ಳದೆಯೇ ಅಭಿವೃದ್ಧಿ ಸಾಧಿಸುವ ಎಲ್ಲ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಕೃಷಿ, ಶಿಕ್ಷಣ ಆರೋಗ್ಯ ಸೇರಿದಂತೆ ಎಲ್ಲ ವಿಚಾರದಲ್ಲಿಯೂ ಜಿಲ್ಲೆಯೇ ಮುಂದಿದೆ. ನಗರೀಕರಣ ರಾಜಕಾರಣಿಗಳ ಒಂದು ಅಸ್ತ್ರ ಅಷ್ಟೇ. ರಾಜಕೀಯ ಬಂಡವಾಳವಾಗಿ ನಗರ ಪ್ರದೇಶಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದ್ದರಿಂದ ನಗರೀಕರಣದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅದು ಶೇ.17ರಷ್ಟು ಆಗುತ್ತಿದೆ. ಈ ಬಗ್ಗೆ ಗಮನಹರಿಸದೆ ಕೃಷಿಯಲ್ಲಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು ಎಂದರು.
ರಾಜ್ಯದ ಜನಸಂಖ್ಯೆ ಸರಾಸರಿಯಲ್ಲಿ ಶೇ.38.57 ನಗರ ಪ್ರದೇಶ ಹಾಗೂ ಶೇ.61.43 ರಷ್ಟು ಗ್ರಾಮೀಣ ಪ್ರದೇಶವಿದೆ. ಇನ್ನು ಮಂಡ್ಯದಲ್ಲಿ ಶೇ.17.08 ರಷ್ಟಿದ್ದು, ಶೇ.82.92 ರಷ್ಟು ಗ್ರಾಮೀಣ ಪ್ರದೇಶವಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಗರೀಕರಣ ತುಂಬ ಕಡಿಮೆ ಇದೆ. ಆದರೆ ನಗರೀಕರಣವಾದರೆ ಮಾತ್ರ ಅಭಿವೃದ್ಧಿನಾ ಒಂದು ವೇಳೆ ನಗರೀಕರಣವಾದರೆ ಯಾವ ರೀತಿಯಲ್ಲಿ ಆಗಬೇಕು ಎಂಬುದು ಬಹು ಮುಖ್ಯವಾದ ಅಂಶ ಎಂದರು.
ಮಂಡ್ಯದಲ್ಲಿ ಭೂಮಿ ಹಿಡುವಳಿ ಏಕ ಪ್ರಕಾರವಾಗಿದೆ. ಶೇ.95ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. ಜಿಲ್ಲೆಯಲ್ಲಿ ಶೇ.67ರಷ್ಟು ಮಾತ್ರ ನೀರಾವರಿ ಪ್ರದೇಶವಾಗಿದೆ. ಅಮೆರಿಕ ಶೇ.15ರಷ್ಟು ನೀರಾವರಿ ಭೂಮಿಯನ್ನು ಮಾತ್ರ ಹೊಂದಿದ್ದು, ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ ಎಂದರೆ ಮಂಡ್ಯ ಏಕೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಮುಂದಿಟ್ಟರು.
ಮಂಡ್ಯದ ನೀರಾವರಿ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಬರುವುದು ಕಾವೇರಿ ವಿಷಯ ಬಂದಾಗ ಮಾತ್ರ. ನೀರು ಸಮಸ್ಯೆಯಿಂದಲ್ಲ. ಇನ್ನು ಕೃಷಿ ಮಾಡುವ ಜಮೀನನ್ನು ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದನ್ನು ತಡೆಗಟ್ಟಿ ಮತ್ತೇ ಭೂಮಿ ಫಲವತ್ತತೆ ಹೆಚ್ಚಿಸಲು ಕ್ರಮವಹಿಸಬೇಕಾಗಿದೆ. ಆದಷ್ಟು ನೈಸರ್ಗಿಕ ಕೃಷಿಯತ್ತ ಹೊರಳಬೇಕಾಗಿದೆ ಎಂದರು.
ಕೃಷಿಗಿಂತ ಹೆಚ್ಚು ಸಮಸ್ಯೆ ಇರುವ ಮತ್ತೊಂದು ಕ್ಷೇತ್ರವಿಲ್ಲ. ಹಾಗೆಯೇ ಸಮಸ್ಯೆ ಇಲ್ಲದ ಕ್ಷೇತ್ರಗಳೂ ಇಲ್ಲ. ಬೇರೆ ಕ್ಷೇತ್ರಗಳಲ್ಲಿ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುವ ರೀತಿಯಲ್ಲಿ ಕೃಷಿಯಲ್ಲಿಯಲ್ಲಿಯೂ ಸಹ ಸಮಸ್ಯೆಗಳ ಅವಲೋಕನ ಆಗಬೇಕು. ಕೃಷಿಯನ್ನು ಆದಾಯ ಬರುವ ಕ್ಷೇತ್ರವನ್ನಾಗಿ ಮಾಡಿಕೊಳ್ಳಲು ವಾತಾವರಣ, ಆದಾಯ, ಅವಶ್ಯಕತೆ, ನಷ್ಟ ಎಲ್ಲದರ ಬಗ್ಗೆಯೂ ವ್ಯವಸ್ಥಿತ ಚಿಂತನೆ ನಡೆಯಬೇಕು. ಹೊಸ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಾಗೃತ ಕರ್ನಾಟಕದ ಸದಸ್ಯ ಜಿ.ಸಂತೋಷ್ ಮಾತನಾಡಿದರು. ಇದಕ್ಕೂ ಮೊದಲು ಉಪನ್ಯಾಸಕ ಪೃಥ್ವಿರಾಜ್ ಬೊಪ್ಪಸಮುದ್ರ ಅವರು ಪ್ರಾಸ್ತಾವಿಕ ಮಾತನಾಡಿದರು. ಜಾಗೃತ ಕರ್ನಾಟಕದ ಕುರಿತು ಡಾ. ಬಿ ಸಿ ಬಸವರಾಜು ಮಾತನಾಡಿದರು. ಪ್ರಜ್ವಲ್ ನಾಗಮಂಗಲ, ಸೀತಾಲಕ್ಷ್ಮೀ, ಎನ್.ನಾಗೇಶ್ ಇತರರಿದ್ದರು.