

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯವು ಬಸವೇಶ್ವರ ಜಯಂತಿ ನಿಮಿತ್ತ ಬಸವೇಶ್ವರ ಪೀಠದಿಂದ ಮೇ 13, 14ರಂದು ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಮೇ 15ರಂದು ಬಸವೇಶ್ವರ ಪೀಠದ ಸುವರ್ಣ ಮಹೋತ್ಸವ ಸಮಾರಂಭವನ್ನು ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರಂದು ಬೆಳಗ್ಗೆ 10 ಗಂಟೆಗೆ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರವಿಶಂಕರ ಬೋಪಲಾಪುರ ಉದ್ಘಾಟಿಸುವರು. ಅತಿಥಿಗಳಾಗಿ ಸಾಹಿತಿ ಗೋ.ರು. ಚೆನ್ನಬಸಪ್ಪ, ಡಾ. ನೀರಜ ಪಾಟೀಲ ಆಗಮಿಸುವರು. ನಂತರದಲ್ಲಿ 2 ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳಲ್ಲಿ ಸಂಸತಿಯ ಪರಿಕಲ್ಪನೆ, ಸಾಂಸತಿಕ ನಾಯಕನ ಗುಣಲಕ್ಷಣಗಳು, ಬಸವಣ್ಣನವರು ರೂಪಿಸಿದ ಶರಣ ಸಂಸತಿ, ಬಸವಣ್ಣನವರ ಬಹುಮುಖ ವ್ಯಕ್ತಿತ್ವ, ಬಸವಣ್ಣನವರ ವಚನಗಳಲ್ಲಿ ಮನೋವಿಜ್ಞಾನ, ಸೇರಿ ವಿವಿಧ ವಿಷಯಗಳ ಕುರಿತು ಸುಮಾರು 16 ಜನರು ಮಾತನಾಡಲಿದ್ದಾರೆ ಎಂದರು.
ಮೇ 14ರಂದು ಮಧ್ಯಾಹ್ನ 3 ಗಂಟೆಗೆ ವಿಚಾರ ಸಂಕಿರಣ ಸಮಾರೋಪ ನಡೆಯಲಿದ್ದು, ಡಾ. ವೀರಣ್ಣ ರಾಜೂರ ಸಮಾರೋಪ ನುಡಿಗಳನ್ನಾಡುವರು. ಅತಿಥಿಗಳಾಗಿ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಸಿ. ಕೃಷ್ಣಮೂತಿರ್ ಆಗಮಿಸಲಿದ್ದಾರೆ. ಡಾ. ಎ.ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮೇ 15ರಂದು ಬೆಳಗ್ಗೆ 10 ಗಂಟೆಗೆ ಸುವರ್ಣ ಮಹೋತ್ಸವ ಭವನದಲ್ಲಿ ಬಸವ ಜಯಂತಿ ಹಾಗೂ ಬಸವೇಶ್ವರ ಪೀಠದ ಸುವರ್ಣ ಮಹೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಚಾಲನೆ ನೀಡುವರು. ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಬಸವಲಿಂಗ ಪಟ್ಟದ್ದೇವರು, ಶ್ರೀ ನೀಲಕಂಠ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಗುರುಮಹಾಂತ ಸ್ವಾಮೀಜಿ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅರವಿಂದ ಜತ್ತಿ, ಡಾ. ಸಿಎಚ್. ವಿಎಸ್.ವಿ. ಪ್ರಸಾದ ಅತಿಥಿಗಳಾಗಿ ಆಗಮಿಸುವರು ಎಂದರು.
ಇದಕ್ಕೂ ಪೂರ್ವದಲ್ಲಿ ಕವಿವಿ ಮುಖ್ಯ ಕಟ್ಟಡದಿಂದ ಸುವರ್ಣ ಮಹೋತ್ಸವ ಭವನವರೆಗೆ ಏರ್ಪಡಿಸಿರುವ ಮೆರವಣಿಗೆಯಲ್ಲಿ ವಿದ್ಯಾಥಿರ್ನಿಯರು ವಚನ ಕುಂಭ ಮೇಳದಲ್ಲಿ ಬಸವೇಶ್ವರ ವಚನಗಳ ಪಠಣ ಮಾಡಲಿದ್ದಾರೆ. ವಿವಿಧ ಬಗೆಯ 15 ಪುಸ್ತಕಗಳ ಲೋಕಾರ್ಪಣೆ, ವಚನ ಬ್ಯಾಂಕ್, ಬಸವೇಶ್ವರ ಪೀಠದ ಸಾಕ್ಷ$್ಯಚಿತ್ರ ಬಿಡುಗಡೆ ಮಾಡಲಾಗುವುದು ಎಂದರು.
ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಸಿ.ಎಂ.ಕುಂದಗೋಳ, ಡಾ.ಬಿ.ಎಚ್.ನಾಗೂರ, ಡಾ.ಜೆ.ಎಂ. ಚಂದುನವರ, ಡಾ. ಸಂಜಯಕುಮಾರ ಮಾಲಗತ್ತಿ, ಡಾ.ಕಿರಣ ಬನ್ನಿಗೊಳ, ಡಾ.ಪ್ರಭಾಕರ ಕಾಂಬಳೆ, ಇತರರು ಇದ್ದರು.