ಜೂ.೧೮ ರಂದು ಸಿಎನ್‌ಸಿಯಿಂದ ವಿಚಾರ ಸಂಕಿರಣ

nachappa
Published on

ಮಡಿಕೇರಿ: ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು ಸೇರಿದಂತೆ ಕೊಡವರ ಪರವಾದ ಕಾನೂನು ಬದ್ಧ ಹಕ್ಕುಗಳ ಪ್ರತಿಪಾದನೆಯ ವಿಚಾರ ಸಂಕಿರಣ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜೂ.೧೮ರಂದು ಮಡಿಕೇರಿ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯುವ ವಿಚಾರ ಸಂಕಿರಣದಲ್ಲಿ ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಅವರು ಉಪನ್ಯಾಸ ನೀಡುವರು, ಇವರ ಪತ್ನಿ ಪ್ರಖ್ಯಾತ ಕಾನೂನು ತಜ್ಞೆ ಹಿಮಾ ಲಾರೆನ್ಸ್ ಉಪಸ್ಥಿತರಿರುವರು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಪ್ರಾದೇಶಿಕ ಸ್ವಾಯತ್ತತೆಯ ಬೇಡಿಕೆಗಳ ಕುರಿತು ತಾವು ಹೊಂದಿರುವ ಪರಿಣತಿಯ ಆಧಾರದಲ್ಲಿ ವಿಕ್ರಮ್ ಹೆಗ್ಡೆ ಅವರು ಉಪನ್ಯಾಸ ನೀಡಲಿದ್ದಾರೆ. ಸಾಂವಿಧಾನಿಕ ಕಾನೂನಿನಲ್ಲಿ ಅವರ ಹಿನ್ನೆಲೆ ಮತ್ತು ಸಿಎನ್‌ಸಿ ಪರವಾಗಿ ಕೊಡವ ಬಂದೂಕು ವಿನಾಯಿತಿ ಪ್ರಕರಣದಲ್ಲಿ ಅವರ ಪಾಲ್ಗೊಳ್ಳುವಿಕೆಯಿಂದ ಅವರ ಮೇಲಿನ ವಿಶ್ವಾಸಾರ್ಹತೆ ಹೆಚ್ಚಾಗಿದೆ. ಈ ವಿಚಾರ ಸಂಕಿರಣ ಮಾಹಿತಿಯುಕ್ತ ಮತ್ತು ಚಿಂತನಶೀಲವಾಗಿರುತ್ತದೆ. ಕೊಡವಲ್ಯಾಂಡ್‌ನ ಆಕಾಂಕ್ಷೆಗಳು ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಿಎನ್‌ಸಿ ಸಂಘಟನೆ ಕಳೆದ ೩೫ ವರ್ಷಗಳಿಂದ ಶಾಂತಿಯುತ ಹೋರಾಟಗಳೊಂದಿಗೆ ಈ ರೀತಿಯ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net