ನಾವು ಅನುಸರಿಸುವ ವೃತ್ತಿ ಬಗ್ಗೆ ದೃಢ ವಿಶ್ವಾಸ; ವಿಚಾರ ಸಂಕಿರಣದಲ್ಲಿ ಡಿಸಿ ಮುಲ್ಲೈ ಮುಗಿಲನ್ ಸಲಹೆ

alvas
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ನಾವು ಅನುಸರಿಸುವ ವೃತ್ತಿ ಬಗ್ಗೆ ನಮಗೆ ದೃಢ ವಿಶ್ವಾಸವಿರಬೇಕು. ಅದು ಆದ್ಯತೆಯಾಗಬೇಕೇ ಹೊರತು ಪರ್ಯಾಯವಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ವತಿಯಿಂದ ಎರಡು ದಿನಗಳ ಪ್ರೊವಿನಿಯೋ-23 ರಾಷ್ಟ್ರೀಯ ವಿಚಾರ ಸಂಕಿರಣ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಫಾದರ್ ಮುಲ್ಲರ್ ಚಾರಿಟೆಬಲ್ ಟ್ರಸ್ಟ್ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ, ಯೆನೆಪೋಯ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಮೊಹಮ್ಮದ್ ಫರ್ಹಾದ್, ಆಳ್ವಾಸ್ ಸಂಸ್ತೆಯ ಟ್ರಸ್ಟಿ ವಿವೇಕ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್ ಕೆ. ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಹೆರಾಲ್ಡ್ ರೋಶನ್ ಪಿಂಟೊ ಸ್ವಾಗತಿಸಿ, ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಆಯೋಜನಾ ಕಾರ್ಯದರ್ಶಿ ಡಾ.ಮೋನಿಕಾ ಲೋಬೊ ವಂದಿಸಿದರು.

ಗೋಷ್ಠಿಯಲ್ಲಿ ಬೆಂಗಳೂರಿನ ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ.ವಿಜಯ ಕೃಷ್ಣ ವಿ, ‘ತೀವ್ರಸ್ತರ ಕಾಯಿಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ವಿಧಾನಗಳ ಸವಾಲುಗಳು ಮತ್ತು ಪರಿಹಾರಗಳು’ ಕುರಿತು ಮಾತನಾಡಿದರು.

ಆಳ್ವಾಸ್ ಹೋಮಿಯೋಪಥಿ ಕಾಲೇಜಿನಲ್ಲಿ ಹೋಮಿಯೋಪಥಿ ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಫಾದರ್ ಮುಲ್ಲರ್ ಚಾರಿಟೆಬಲ್ ಟ್ರಸ್ಟ್‌ನ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ಇದ್ದರು.

ಪ್ರಬಂಧ ಮಂಡನೆ, ಔಷಧಾಲಯ ಪ್ರದರ್ಶನ
ಕೇರಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ತಾನ, ಮಣಿಪುರ, ಗುಜರಾತ್ ಹಾಗೂ ಆಂಧ್ರಪ್ರದೇಶ ಮೊದಲಾದ ರಾಜ್ಯಗಳ ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಸೇರಿದಂತೆ 1,045 ಪ್ರತಿನಿಧಿಗಳು ಪಾಲ್ಗೊಂಡಿದ್ದರು. 11 ವೈದ್ಯಕೀಯ ಔಷಧಾಲಯ ಪ್ರದರ್ಶನಗಳು, 30ಕ್ಕೂ ಹೆಚ್ಚು ಭಿತ್ತಿಚಿತ್ರಗಳು, 12 ಪ್ರಬಂಧಗಳ ಮಂಡನೆಯಾದವು. ಆಳ್ವಾಸ್ ಹೋಮಿಯೋಪಥಿ ಹಿರಿಯ ವಿದ್ಯಾರ್ಥಿಗಳ ಸಭೆ ನಡೆಯಿತು. ಆಳ್ವಾಸ್ ಸಾಂಸ್ಕೃತಿಕ ತಂಡ ಪ್ರದರ್ಶನ ನೀಡಿತು. ದೇಶದ ವಿವಿಧೆಡೆಯ 10ಕ್ಕೂ ಹೆಚ್ಚು ಹೋಮಿಯೋಪಥಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ 120ಕ್ಕೂ ಹೆಚ್ಚು ವೈದ್ಯಕೀಯ ಪ್ರಾಧ್ಯಾಪಕರು ಹಾಗೂ ವೃತ್ತಿಪರರು ಪಾಲ್ಗೊಂಡರು.

ಆಯುರ್ವೇದ, ಹೋಮಿಯೋಪಥಿ, ಯುನಾನಿ ಇತ್ಯಾದಿ ವೈದ್ಯಕೀಯ ಪದ್ಧತಿ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಕಡಿಮೆ ಇದೆ. ಹೀಗಾಗಿ ತಪ್ಪು ಗ್ರಹಿಕೆ ಉಂಟಾಗಿದೆ. ಇವುಗಳನ್ನು ಹೋಗಲಾಡಿಸುವುದೂ ಈ ವೈದ್ಯಕೀಯ ಪದ್ಧತಿ ಅನುಸರಿಸುವವರ ಕರ್ತವ್ಯ. ಸಾಮಾನ್ಯ ಜನರಿಗೂ ಆರೋಗ್ಯ ಕೈಗೆಟುಕುವಂತೆ ಮಾಡುವುದು ಆಡಳಿತದ ಆದ್ಯತೆ. ಈ ನಿಟ್ಟಿನಲ್ಲಿ ಹೋಮಿಯೋಪಥಿ ಮತ್ತಿತರ ವೈದ್ಯಕೀಯ ಪದ್ಧತಿ ಜನರಿಗೆ ನೆರವಾಗುತ್ತಿವೆ.
ಮುಲ್ಲೈ ಮುಗಿಲನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net