

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದ ಸಂಗಯ್ಯನಪುರದಲ್ಲಿ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನವನ್ನು ಫೆ.23ರಂದು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದರು.
ಅಂದು ಬೆಳಗ್ಗೆ 9.30ಕ್ಕೆ ತಾಲೂಕು ಪಂಚಾಯಿತಿ ನಿವೃತ್ತ ವಿಸ್ತರಣಾಧಿಕಾರಿ ಕೆದಂಬಾಡಿ ಈರಪ್ಪ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅರಕಲಗೂಡಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹುಲಿಮನೆ ಮಾದಪ್ಪ ದ್ವಾರವನ್ನು ಉದ್ಘಾಟಿಸಲಿದ್ದು, ಗಣಗೂರು ಗ್ರಾ.ಪಂ. ಅಧ್ಯಕ್ಷ ಸವಿತಾ ಸುಕುಮಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆಲೂರು ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್ ಸಮ್ಮೇಳನ ಧ್ವಜಾರೋಹಣ ಮಾಡಲಿದ್ದು, ಬೆಳಗ್ಗೆ 10.15ಕ್ಕೆ ಅಬ್ಬೂರು ಕಟ್ಟೆ ಕ್ಷೇತ್ರದ ತಾಪಂ ಸದಸ್ಯೆ ಬಟ್ಯನ ಸವಿತಾ ಈರಪ್ಪ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅರೆಭಾಷೆ ಸಾಹಿತಿ ಹೊದ್ದೆಟಿ ಭವಾನಿಶಂಕರ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಂದು ಬೆಳಗ್ಗೆ 10.30 ಗಂಟೆಗೆ ಸಮ್ಮೇಳನವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭಾಗವಹಿಸಲಿದ್ದು, ಲಕ್ಷ್ಮೀನಾರಾಯಣ ಕಜೆಗದ್ದೆ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಮಧ್ಯಾಹ್ನ 1 ಗಂಟೆಗೆ ಲೋಕೇಶ್ ಊರುಬೈಲು ಮತ್ತು ತಂಡದವರಿಂದ ಸಿರಿ ಸುಗ್ಗಿ ಜನಪದ ಶೈಲಿಯ ಅರೆಭಾಷೆ ಹಾಡುಗಳು ನಡೆಯಲಿದೆ. ಸಂಜೆ 5 ಗಂಟೆಗೆ ಪೊನಿಧ್ವನಿ ಸಾಂಸ್ಕೃತಿಕ ಜಂಬರ ಕಾವೇರಿ ನಾಡ್ ಕಲಾವಿದರು ನಾಡಿನ ಸಂಸ್ಕೃತಿ ಮತ್ತು ಹಿರಿಮೆ ಕುರಿತು ನೃತ್ಯ ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಧನಂಜಯ ಅಗೋಳಿಕಜೆ, ದೇವಾಯಿರ ಗಿರೀಶ್, ಕುಯ್ಯಮುಡಿ.ವಿ.ಜಯಕುಮಾರ್, ದೇವಯ್ಯ ಉಪಸ್ಥಿತರಿದ್ದರು.
ಪುಸ್ತಕಗಳ ಬಡುಗಡೆ: ಅಕಾಡೆಮಿ ಪ್ರಕಟಿಸುತ್ತಿರುವ ಪುಸ್ತಕ ಹಾಗೂ ಅರೆಭಾಷೆ ಕಾದಂಬರಿಗಳಾದ ಪುಂಸ್ತ್ರೀ, ಕಲ್ಯಾಣ ಸ್ವಾಮಿ ಮತ್ತು ಕಥಾ ಸಂಕಲನ ಅಪೂರ್ವ ಸಂಗಮ ಪುಸ್ತಕಗಳನ್ನು ಮಡಿಕೇರಿ ಶಾಸಕರು ಬಿಡುಗಡೆ ಮಾಡಲಿದ್ದಾರೆ. ನಂತರ ಶಾಸಕ ಕೆ.ಜಿ.ಬೋಪಯ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಹ್ಮಣಿ, ಜಿಪಂ ಅಧ್ಯಕ್ಷ ಬಿ.ಎಚ್.ಹರೀಶ್, ತಾ.ಪಂ ಅಧ್ಯಕ್ಷೆ ಪುಷ್ಪಾ ರಾಜೇಶ್, ನಿಕಟಪೂರ್ವ ಸಮ್ಮೇಳಾನಧ್ಯಕ್ಷ ಕೆ.ಆರ್.ಗಂಗಾಧರ್, ಜಿ.ಪಂ. ಸದಸ್ಯೆ ಸರೋಜಮ್ಮ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ್ಕ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಕೊಲ್ಯದ ಗಿರೀಶ್, ಪಿ.ಸಿ.ಜಯರಾಮ ಪಾಲ್ಗೊಳ್ಳಲಿದ್ದಾರೆ.
ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ
ಮಧ್ಯಾಹ್ನ 12 ಗಂಟೆಗೆ ಮಂಗಳೂರು ಸಂತ ಎಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ. ’ಅರೆಭಾಷೆ ಮತ್ತು ಸಂಸ್ಕೃತಿ ಅಂದು-ಇಂದು-ಮುಂದೆ’ ಕುರಿತು ಸೀತಾರಾಮ ಕೇವಳ, ’ಅರೆಭಾಷೆ ಮತ್ತು ಸಂಸ್ಕೃತಿ ಪ್ರಸರಣದಲ್ಲಿ ಅವ್ವ’ ವಿಚಾರ ಕುರಿತು ಶೈಲಜಾ ದಿನೇಶ್ ಮಾತನಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬಾರಿಯಂಡ ಜೋಯಪ್ಪ ಅಧ್ಯಕ್ಷತೆಯಲ್ಲಿ ಅರೆಭಾಷೆ ಕವಿಗೋಷ್ಠಿ ನಡೆಯಲಿದ್ದು, ಎಡಿಕೇರಿ ವಿಶ್ವನಾಥ, ವಿನೋದ್ ಮೂಡಗದ್ದೆ, ಲೀಲಾದಾಮೋದರ, ಕೃಪಾ ದೇವರಾಜ್ ಪೂಜಾರೀರ, ಸಂಜೀವ ಕುದ್ಪಾಜೆ ಮತ್ತು ಹರ್ಷಿತಾ ಪೇರಿಯನ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ
ಮಧ್ಯಾಹ್ನ 3 ಗಂಟೆಗೆ ಮೈಸೂರು-ಕೊಡಗು ಜಿಲ್ಲಾ ಸಂಸದ ಪ್ರತಾಪ್‌ಸಿಂಹ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಡಾ.ಕೊಳಂಬೆ ಚಿದಾನಂದ ಗೌಡ, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸೋಮವಾರಪೇಟೆ ತಾ.ಪಂ. ಅಧ್ಯಕ್ಷ ಅಭಿಮನ್ಯುಕುಮಾರ್, ಪ್ರಮುಖರಾದ ಸೂರ್ತಲೆ ಆರ್.ಸೋಮಣ್ಣ, ಹೊದ್ದೆಟ್ಟಿ ಭವಾನಿಶಂಕರ, ತೇನನ ರಾಜೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಇತರರು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಹೊಸೂರು ಶಿವಪ್ರಕಾಶ್- ಸಮಾಜ ಸೇವೆ, ಅತ್ಯಾಡಿ.ಎಂ.ಪೂವಯ್ಯ-ಸಂಸ್ಕೃತಿ, ಅಜಿರಂಗಲ ರಾಮಣ್ಣ-ಕೃಷಿ, ನವನೀತ ಪಟ್ಟೆಮನೆ-ಕ್ರೀಡೆ, ಪಿ.ಜಿ.ಅಂಬೆಕಲ್-ಸಾಹಿತ್ಯ, ಹರಿಪ್ರಸಾದ್ ಅಡ್ಪಂಗಾಯ- ಪತ್ರಿಕೋದ್ಯಮ, ಅಮ್ಮಾಜೀರ ಹರ್ಷಿತ್-ಯುವ ಸಾಧಕ, ನಿಂಗರಾಜು ನಂಗಾರು-ಶಿಕ್ಷಣ ಕ್ಷೇತ್ರದಿಂದ ಸನ್ಮಾನಿಸಲಾಗುತ್ತಿದೆ. ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಗಣ್ಯರನ್ನು ಸನ್ಮಾನಿಸಲಿದ್ದಾರೆ.