

ವಿಜಯಪುರ: ಜೀವಕ್ಕೆ ಶಕ್ತಿ ತುಂಬುವ ತರಕಾರಿ, ಆಹಾರ ಧಾನ್ಯಗಳ ಮಾರಾಟಕ್ಕೊಂದು ಸೂಕ್ತ ವ್ಯವಸ್ಥೆ ಇರಬೇಕೆನ್ನುವುದು ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರ ಆಶಯ. ಈ ಆಶಯ ಈಡೇರಿಸಬೇಕಾದ ಮಹಾನಗರ ಪಾಲಿಕೆ ಬೇಜವಾಬ್ದಾರಿ ತೋರಿದರೆ ಎಂಥ ವಾತಾವರಣ ಸೃಷ್ಟಿಯಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ನಗರದ ಸ್ಯಾಟ್ಲೈಟ್ ಬಸ್ ನಿಲ್ದಾಣ ಬಳಿಯ ತರಕಾರಿ ಮಾರುಕಟ್ಟೆ.
ಸ್ಯಾಟ್ಲೈಟ್ ಬಸ್ ನಿಲ್ದಾಣ ಬಳಿಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ತರಕಾರಿ ಜತೆಗೆ ಅಲ್ಲಲ್ಲಿ ಕಾಳು&ಕಡಿ ಕೂಡ ಮಾರಾಟ ಮಾಡಲಾಗುತ್ತಿದೆ.
ವಿಶೇಷವಾಗಿ ಈ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗಿಂತ ರೈತರು ಹಾಗೂ ಕೃಷಿಕ ಮಹಿಳೆಯರು ತಾವು ಬೆಳೆದ ಕಾಯಿಪಲ್ಯೆ, ಹಣ್ಣು ಹಂಪಲವನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಾರಾಟ ಮಾಡುತ್ತಾರೆ.
ಭಾನುವಾರ ಹೊರತುಪಡಿಸಿ ಪ್ರತಿದಿನ ನಡೆಯುವ ತರಕಾರಿ ಮಾರುಕಟ್ಟೆಗೆ ಸ್ಯಾಟ್ಲೈಟ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳ ಹಲವು ಜನರು ಆಗಮಿಸುತ್ತಾರೆ. ಉತ್ತಮ ವಹಿವಾಟಿನಿಂದ ಕೂಡಿದ ಮಾರುಕಟ್ಟೆಗೆ ಮೂಲ ಸೌಲಭ್ಯಗಳಿಲ್ಲದೆ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಅಂದಾಜು 300 ಅಡಿ ಉದ್ದದ ರಸ್ತೆ ಅಕ್ಕಪಕ್ಕದ ಜಾಗದಲ್ಲಿ ತರಕಾರಿ ವಹಿವಾಟು ನಡೆಯುತ್ತದೆ. ರಸ್ತೆ ಪಕ್ಕದ ಒಂದು ಕಡೆ ನಿರ್ಮಿಸಿರುವ ಕಟ್ಟೆಗೆ ಕಬ್ಬಿಣ ಕಂಬ ಬಳಸಿ ಪತ್ರಾಸ್ ಅಳವಡಿಸಿದ್ದು, ಅದು ಸುವ್ಯವಸ್ಥೆಯಲ್ಲಿರದ ಕಾರಣ ಸಮರ್ಪಕವಾಗಿ ಅದರ ಬಳಕೆ ಅಗುತ್ತಿಲ್ಲ.
ಬಹುತೇಕ ರೈತರು ಹಾಗೂ ವ್ಯಾಪಾರಿಗಳು ರಸ್ತೆ ಅಕ್ಕಪಕ್ಕದಲ್ಲೆ ಕುಳಿತು ತರಕಾರಿ ಮಾರಾಟ ಮಾಡುತ್ತಾರೆ. ಮಣ್ಣಿನಿಂದ ಕೂಡಿರುವ ರಸ್ತೆಯಲ್ಲಿ ಮಳೆಯಾದಾಗ ಎಲ್ಲೆಡೆ ರಾಡಿ ಆವರಿಸುತ್ತದೆ. ಗಲೀಜಿನಲ್ಲೆ ಜನರ ದೇಹ ಸೇರುವ ಆಹಾರ ಪದಾರ್ಥಗಳ ಮಾರಾಟ ಮಾಡುತ್ತಿರುವುದನ್ನು ನೋಡಿದರೆ ಯಾರಿಗಾದರೂ ನಮ್ಮಲ್ಲಿರುವುದು ಎಂಥ ವ್ಯವಸ್ಥೆ ಎನ್ನಿಸದಿರದು.
ಬಹುತೇಕ ಗ್ರಾಹಕರು ಗಲೀಜು ನೋಡಿ ತರಕಾರಿ ಖರೀದಿಸದೆ ಬರಿಗೈಲಿ ಮನೆಗೆ ತೆರಳುತ್ತಿರುವುದು ಗುರುವಾರ ಕಂಡು ಬಂದಿತು.
ಅವ್ಯವಸ್ಥೆಯ ಆಗರವಾದ ಮಾರುಕಟ್ಟೆಯಲ್ಲಿ ತರಕಾರಿ ವಹಿವಾಟು ನಡೆಯದಿದ್ದರೂ ರೈತರು, ವ್ಯಾಪಾರಿಗಳು ತೆರಿಗೆ ಭರಿಸಲೇಬೇಕು. ಗುರುವಾರ ಮಾರುಕಟ್ಟೆ ಸ್ಥಿತಿ ನೋಡಿ ಕೆಲವರು ತೆರಿಗೆ ಕೊಡಲು ನಿರಾಕರಿಸಿದಾಗ ಟೆಂಡರ್ ಹಿಡಿದ ಗುತ್ತಿಗೆದಾರ ಮಾತ್ರ ನಿಮ್ಮ ಸಮಸ್ಯೆ ಏನಿದ್ದರೂ ಪಾಲಿಕೆಗೆ ತಿಳಿಸಿ ತೆರಿಗೆ ಮಾತ್ರ ಕೊಡಲೇಬೇಕು ಎಂದು ಹಟ ಹಿಡಿದ ಟನೆಯು ನಡೆಯಿತು. ಗುತ್ತಿಗೆದಾರನ ಮಾತಿನಿಂದ ಅಸಹಾಯಕ ವ್ಯಾಪಾರಸ್ಥರು ತೆರಿಗೆ ಭರಿಸಲು ಮುಂದಾದರು.
ಉತ್ತಮ ತರಕಾರಿ, ಹಣ್ಣುಗಳ ಬೆಳೆಗೆ ವಿಜಯಪುರ ಜಿಲ್ಲೆ ರಾಜ್ಯದಲ್ಲೆ ಪ್ರಸಿದ್ಧಿ ಹೊಂದಿದೆ. ಜಿಲ್ಲಾ ಕೇಂದ್ರದಲ್ಲೆ ತರಕಾರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ನೋವಿನ ಸಂಗತಿ. ಮಹಾನಗರ ಪಾಲಿಕೆಯವರು ಸೌಲಭ್ಯ ಕಲ್ಪಿಸಿ ಉತ್ತಮ ಮಾರುಕಟ್ಟೆ ನಿರ್ಮಿಸಲಿ ಎಂದು ಸ್ಯಾಟ್ಲೈಟ್ ನಿಲ್ದಾಣ ಸುತ್ತಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಸಾವಿರಾರು ಜನ ದಿನನಿತ್ಯದ ಕಾಯಿಪಲ್ಲೆ ತರಲು ಇಲ್ಲಿಗೆ ಬರುತ್ತಾರೆ. ಅವರೆಲ್ಲ ಕೆಸರಿನಲ್ಲಿ ಕಾಯಿಪಲ್ಲೆ ತೆಗೆದುಕೊಳ್ಳುವ ಪರಿಸ್ಥಿತಿ ಇದೆ. ಇಷ್ಟೆಲ್ಲ ತೊಂದರೆ ಆಗುತ್ತಿದ್ದರೂ ಜಕಾತಿ ಮಾತ್ರ ದಿನನಿತ್ಯ ರೈತರಿಂದ ವಸೂಲಿ ಮಾಡುತ್ತಿದ್ದಾರೆ. ಪಾಲಿಕೆ ಕೂಡಲೇ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು. ಶರಣು ಸಬರದ, ಅಧ್ಯಕ್ಷ, ಜಿಲ್ಲಾ ಯುವ ಪರಿಷತ್
ಶರಣು ಸಬರದ, ಅಧ್ಯಕ್ಷ, ಜಿಲ್ಲಾ ಯುವ ಪರಿಷತ್