

ಮಂಡ್ಯ: ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಅಗತ್ಯವಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಜೀಗುಂಡಿಪಟ್ಟಣ ಗ್ರಾಮದಲ್ಲಿ ಬೆಲ್ಲ ರೈತ ಉತ್ಪಾದಕ ಕಂಪನಿ ಆಯೋಜಿಸಿದ್ದ ರಾಸಾಯನಿಕ ಮುಕ್ತ ಬೆಲ್ಲ ಮತ್ತು ಕೃಷಿ ಪರಿಕರಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು. ರೈತರು ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಮೀಣ ವ್ಯಾಪ್ತಿಯಲ್ಲಿ ರಾಸಾಯನಿಕ ಮುಕ್ತ ಬೆಲ್ಲ ಮತ್ತು ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಹೆಚ್ಚಾಗಬೇಕಿದೆ. ಆರೋಗ್ಯಕ್ಕಾಗಿ ರಾಸಾಯನಿಕ ಮುಕ್ತ ಪದಾರ್ಥಗಳನ್ನು ಖರೀದಿಸುವ ಮನೋಭಾವ ಹೆಚ್ಚಿಸಿಕೊಳ್ಳಬೇಕಿದೆ ಎಂದು ನುಡಿದರು.
ರೈತರಿಗೆ ಬೇಕಾಗುವಂತದ ಕೃಷಿ ಪರಿಕರ, ಪಶುಗಳಿಗೆ ರಾಸಾಯನಿಕ ಮುಕ್ತ ಆಹಾರ ಲಭ್ಯವಾಗುತ್ತಿರುವುದನ್ನು ಹೈನುಗಾರಿಕೆಗಾರರು ಸದುಪಯೋಗಪಡಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಇಂತಹ ಮಳಿಗೆಗಳು ತೆರೆದುಕೊಳ್ಳಲಿ. ರೈತರಿಂದ ರೈತರಿಗೆ ನೇರವಾಗಲಿ. ಅಂತೆಯೇ ಉತ್ಪಾದನೆಯ ಲಾಭ ರೈತರಿಗೆ ಸಿಗುವಂತೆ ಮಾಡಲು ಸರ್ಕಾರಿ ಅಧಿಕಾರಿಗಳು, ಕಂಪನಿ ಮಾರ್ಗದರ್ಶನ ನೀಡಬೇಕು ಎಂದರು.
ನಬಾರ್ಡ್ ಡಿಡಿಎಂ ಹರ್ಷಿತಾ ಮಾತನಾಡಿ, ಕಂಪನಿಯಲ್ಲಿ ಸಾವಿರಕ್ಕೂ ಹೆಚ್ಚು ಷೇರುದಾರರಿದ್ದು, ಒಗ್ಗೂಡಿ ಕಾರ್ಯಸಾಧನೆಗೆ ಮುಂದಾಗಿದ್ದಾರೆ. ನಿಷ್ಠೆಯಿಂದ ಕಾರ್ಯ ಮಾಡಿ ರೈತರ ಅನುಕೂಲಕ್ಕಾಗಿ ಮಳಿಗೆ ತೆರಯಲಾಗಿದೆ. ಇಲಾಖೆ ಅಧಿಕಾರಿಗಳು, ಬ್ಯಾಂಕ್‌ನ ಸಹಕಾರದಿಂದ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.
ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು ಮಾತನಾಡಿ, ಜಿಲ್ಲೆಯಲ್ಲಿ ಬೆಲ್ಲದ ವೈಭವನ್ನು ಮರುಕಳಿಸಬೇಕು. ಆ ಮೂಲಕ ಇಡೀ ರಾಜ್ಯಾದ್ಯಂತ ವಿಸ್ತಾರಗೊಳಿಸಬೇಕೆಂಬ ಸಂಕಲ್ಪವಿದೆ. ಪ್ರಸ್ತುತ 2023-24ನೇ ಸಾಲಿನಲ್ಲಿ ಕನಿಷ್ಟ 2 ರಿಂದ 3 ಕೋಟಿ ರೂಗಳ ವ್ಯವಹಾರ ಮಾಡಬೇಕೆನ್ನುವ ಮೂಲ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕಂಪನಿ ಅಧ್ಯಕ್ಷ ಕಾರಸವಾಡಿ ಮಹದೇವ, ಎಬಿಐ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಸುಮನಾ, ಎಜಿಎಂ ವಿಶ್ವಾಸ್, ಜಿ.ಪಂ ಮಾಜಿ ಸದಸ್ಯ ಮಾದಪ್ಪ, ಎಪಿಎಂಸಿ ಉಪಾಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಮಾದೇಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಜೀಗುಂಡಿಪಟ್ಟಣ ಕೃಷ್ಣಪ್ಪ ಇತರರಿದ್ದರು.