

ಮಾಂಜರಿ: ಸ್ವಾರ್ಥ ಇಟ್ಟುಕೊಂಡು ಸಹಕಾರಿ ರಂಗಕ್ಕೆ ಬರಬಾರದು. ಬಡವ, ರೈತ ಮತ್ತು ಆರ್ಥಿಕ ಹಿಂದುಳಿದ ವರ್ಗಗಳ ಏಳಿಗೆಯ ಉದ್ದೇಶವಿದ್ದರೆ ಸಹಕಾರ ರಂಗ ಅಭಿವೃದ್ಧಿ ಹೊಂದುತ್ತದೆ. ಸಮಾಜದಲ್ಲಿರುವ ಆರ್ಥಿಕ ಸಮಾನತೆ ಹೋಗಲಾಡಿಸಲು ಸಹಕಾರಿ ಸಂಸ್ಥೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಸಮೀಪದ ಸಿದ್ದಾಪುರವಾಡಿ ಗ್ರಾಮದಲ್ಲಿ ಸೋಮವಾರ ಶ್ರೀ ಸಿದ್ದೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಸಹಕಾರಿ ಸಂಸ್ಥೆಯ ಮೂಲಕ ರೈತರ ಅನುಕೂಲಕ್ಕಾಗಿ ಮತ್ತು ಸಮಾಜದಲ್ಲಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಸಲುವಾಗಿ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಜನರು ಸದುಪಯೋಗ ಪಡೆದು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು ಎಂದರು.
ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಕೆಎಲ್‌ಇ ಸಂಸ್ಥೆಯ ಮೂಲಕ ಮಾಡಿರುವ ಕಾರ್ಯ ಜಗ ಮೆಚ್ಚುವಂತೆ ಮಾಡಿದೆ. ಶಿಕ್ಷಣ, ಆರೋಗ್ಯ, ಸಹಕಾರ ಮತ್ತು ಔದ್ಯೋಗಿಕ ಸಂಸ್ಥೆ ಸ್ಥಾಪಿಸಿ ಹಲವಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಅನ್ನದಾತರಾಗಿದ್ದಾರೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗುಡೆ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಭರತೇಶ ಬನವಣೆ, ಅಜಿತರಾವ್ ದೇಸಾಯಿ, ಮಹಾವೀರ ಕಾತ್ರಾಳೆ, ಭರಮಗೌಡ ಪಾಟೀಲ, ಅಣ್ಣಾಸಾಹೇಬ ಇಂಗಳೆ, ಅಂಕಲಿ ಗ್ರಾಪಂ ಅಧ್ಯಕ್ಷ ಅಜಿತ್ ಉಮಾರಾನೆ, ಸಂಘದ ಅಧ್ಯಕ್ಷ ರಾಮಗೌಡ ಉಮರಾನೆ, ಉಪಾಧ್ಯಕ್ಷ ರಾಮ ಖಡ್ಡಣ್ಣವರ ಇದ್ದರು.
ಧರೆಪ್ಪ ಕಿರೂರೆ ಸ್ವಾಗತಿಸಿದರು. ಎನ್.ಆರ್. ಉಮರಾನೆ ನಿರೂಪಿಸಿ, ವಂದಿಸಿದರು.