

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದು ಎಲ್ಲೆಡೆ ಭ್ರಷ್ಟಾಚಾರದ ಮಾತು ಕೇಳಿ ಬರುತ್ತಿದೆ. ಇದು ಸಮಾಜಕ್ಕೆ ಅಂಟಿದ ಪಿಡುಗು. ಇದನ್ನು ತೊಡೆದು ಹಾಕಲು ನಿಸ್ವಾರ್ಥ ಸೇವೆ, ನಿಸ್ವಾರ್ಥ ಜೀವನ ನಮ್ಮದಾಗಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಲೋಕಾಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರವು ನಿರಂತರ ಸೇವೆ, ಪ್ರಾಮಾಣಿಕತೆ ತಿಂದು ಹಾಕುತ್ತದೆ. ಸಮಾಜ ಕಲುಷಿತಗೊಂಡರೆ, ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರು ಪಾರದರ್ಶಕವಾಗಿ ಮತ್ತು ಆತ್ಮಸಾಕ್ಷಿಯಿಂದ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸಬೇಕು. ನಿಯತ್ತಿನ ದುಡಿಮೆ ಆತ್ಮಬಲ ಹೆಚ್ಚಿಸುತ್ತದೆ. ಕಾಯಕ ಶುದ್ಧವಾಗಿದ್ದರೆ ಕಾಯಲು ಬೇರೆಯವರ ಅಗತ್ಯವಿಲ್ಲ. ಇತರರ ದುಡಿಮೆ ಗುರುತಿಸಿ, ಗೌರವಿಸೋಣ. ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗೆ ಎಲ್ಲರೂ ಸೇರಿ ಬದುಕೋಣ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಮಾತನಾಡಿ, ಅತಿ ಆಸೆ ಪಡದೆ, ಬಂದಿರುವ ಪಾಲನ್ನು ಅನುಭವಿಸಬೇಕು. ಪ್ರತಿಯೊಬ್ಬರಿಗೆ ಕೆಲಸದಲ್ಲಿ ತೃಪ್ತಿ, ಉತ್ತಮ ಆರೋಗ್ಯ ಮುಖ್ಯ. ಸದ್ಭಾವನೆಯಿಂದ ಕರ್ತವ್ಯ ನಿರ್ವಹಿಸಿದರೆ ಬದುಕು ಸುಂದರವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸರ್ಕಾರಿ ನೌಕರರಲ್ಲಿ ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ ಮತ್ತು ಮಾನವೀಯತೆ ಇದ್ದಾಗ ಸಮಸ್ಯೆಗಳು ಬರುವುದಿಲ್ಲ. ಬೇರೆಯವರಿಗೆ ತೊಂದರೆಯೂ ಆಗುವುದಿಲ್ಲ. ನಮ್ಮ ಬದುಕು ಇತರರಿಗೆ ಮಾದರಿ ಆಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಇದ್ದರು.
ಹುನಮಂತರಾಯ ಸ್ವಾಗತಿಸಿದರು. ಅಲಿ ಮಹಮ್ಮದ ತಹಶೀಲ್ದಾರ ನಿರೂಪಿಸಿದರು. ಸೋಮಶೇಖರ ಜಾಡರ ವಂದಿಸಿದರು.