ಕಾನಹೊಸಹಳ್ಳಿ: ಸೇಹ್ನಿತರೊಂದಿಗೆ ಕೆರೆಕೊಡಿ ಬಳಿ ತೆರಳಿ ಸೆಲ್ಫಿ ತೆಗೆಯಲು ಹೋಗಿ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಯುವಕನೊಬ್ಬ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಕೆ.ದಿಬ್ಬದಹಳ್ಳಿ ಗ್ರಾಮದ ಚೇತನ ಕುಮಾರ (21)ಮೃತ. ಕುಟುಂಬದವರ ಜತೆ ಕೋಡಿ ಬಿದ್ದ ಕೆರೆಯನ್ನು ನೋಡಲು ತೆರಳಿದಾಗ, ಇಬ್ಬರು ಸ್ನೇಹಿತರೊಂದಿಗೆ ತುಂಬಿದ ಕೆರೆ ಕೋಡಿ ಬಳಿ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದು, ಅಕಸ್ಮಿಕವಾಗಿ ಕಾಲು ಜಾರಿಬಿದ್ದಿದ್ದಾನೆ.
ಶಾಸಕರಿಂದ ಸಾಂತ್ವನ: ವಿಷಯ ತಿಳಿಯುತ್ತಿದ್ದಂತೆ ಶಾಸಕ ಡಾ.ಎನ್.ಟಿ.ಶ್ರಿನಿವಾಸ ಶುಕ್ರವಾರ ರಾತ್ರಿ ಕೆ.ದಿಬ್ಬದಹಳ್ಳಿಗೆ ಭೇಟಿ ನೀಡಿ, ಮೃತ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿ, ಇತ್ತೀಚೆಗೆ ಕುಮತಿ ಗ್ರಾಮದಲ್ಲಿ ಈಜಲು ಹೋಗಿ 3 ಮಕ್ಕಳು ಮೃತಪಟ್ಟ ಘಟನೆ ಮಾಸುವ ಮುನ್ನವೇ ಈ ಘಟನೆ ಜರುಗಿರುವುದು ನೋವಿನ ಸಂಗತಿ.
ಕೆರೆ, ಕಟ್ಟೆ, ಹಳ್ಳಗಳು ಮೈತುಂಬಿ ಹರಿಯುತ್ತಿರುವುದರಿಂದ ಸಾರ್ವಜನಿಕರು, ಮಕ್ಕಳು, ಬಟ್ಟೆ ತೊಳೆಯಲು ತೆರಳುವವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಓಬಮ್ಮ, ಉಪಾಧ್ಯಕ್ಷ ಆರ್.ಬಸವರಾಜ, ವೆಂಕಟೇಶ, ಸಣ್ಣ ಚನ್ನಪ್ಪ, ದೊಡ್ಡ ಚನ್ನಪ್ಪ, ವಕೀಲ ಪಾಪಣ್ಣ, ಗುಂಡಮುಣಗು ಮಂಜಣ್ಣ, ಆಂಜನೇಯ, ನಡುವಲಹಳ್ಳಿ ಕುಮಾರಸ್ವಾಮಿ ಇತರರಿದ್ದರು.