

ಕಾರ್ಕಳ: ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಏ.12ರಂದು ನಂದಳಿಕೆ ಸಿರಿ ಜಾತ್ರೆ ಆಯನೋತ್ಸವ ಜರುಗಲಿದ್ದು, ಭಕ್ತರ ಸ್ವಾಗತಕ್ಕೆ ಸೆಲ್ಫಿ ಪಾಯಿಂಟ್ ಸಹಿತ ವಿಭಿನ್ನ ತಯಾರಿಗಳನ್ನು ಈ ಬಾರಿ ಕೈಗೊಳ್ಳಲಾಗಿದೆ.
ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಅವರ ವಿಶೇಷ ಪರಿಕಲ್ಪನೆಯಲ್ಲಿ ಮೈಲಿಗಲ್ಲು, ಕೊಡೆ, ಭತ್ತದ ಗೋಣಿ ಚೀಲ, ಮಾವಿನ ತೋರಣ, ಹಕ್ಕಿಗಳಿಗೆ ನೀರಿಡುವ ಮಡಿಕೆ ಸಹಿತ ಹಲವು ವಿಶೇಷ ಯೋಜನೆಗಳ ಮೂಲಕ ಈಗಾಗಲೇ ಸಿರಿಜಾತ್ರೆಗೆ ಪ್ರಚಾರ ನೀಡಲಾಗಿದ್ದು, ಜತೆಗೆ ದೇವಳದ ಗೋಪುರ ಮಾದರಿಯಲ್ಲಿ ಸೆಲ್ಫಿ ಪಾಯಿಂಟ್ ಸೇರ್ಪಡೆಗೊಳಿಸುವ ಮೂಲಕ ಸಿರಿಜಾತ್ರೆಗೆ ಮತ್ತಷ್ಟು ಮೆರುಗು ನೀಡಲಾಗಿದೆ.
ದೇಗುಲದ ಗೋಪುರ ಮಾದರಿಯ ಬೃಹತ್ ಬ್ಯಾನರ್ ಕಟೌಟ್ ನಿರ್ಮಿಸಲಾಗಿದ್ದು, ಇದನ್ನು ಬಸ್ ನಿಲ್ದಾಣ ಸಹಿತ ಅತೀ ಹೆಚ್ಚು ಜನ ಸಂದಣಿ ಇರುವ ಪ್ರದೇಶದಲ್ಲಿ ಅಳವಡಿಸಲಾಗುವುದು. ಇದರ ಮುಂದೆ ನಿಂತು ಜನರು ಫೋಟೊ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಬೇಕು. ಉತ್ತಮ ಫೋಟೊಗಳಿಗೆ ಕ್ಷೇತ್ರದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.