ಸ್ವಸಹಾಯ ಸಂಘಗಳಿಂದ ಆರ್ಥಿಕ ಪ್ರಗತಿ

12sirsi2
Published on

ಶಿರಸಿ: ಮನುಷ್ಯನಿಗೆ ಕ್ರಿಯಾ ಶಕ್ತಿ ಎಲ್ಲಕ್ಕಿಂತ ಪ್ರಮುಖ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲೀಯಲ್ಲಿ ಭಾನುವಾರ ನಡೆದ ಸ್ವ ಸಹಾಯ ಸಂಘಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಮನುಷ್ಯನಿಗೆ ಜ್ಞಾನ ಶಕ್ತಿ, ಇಚ್ಛಾಶಕ್ತಿ ಮುಖ್ಯ. ಅದೇ ರೀತಿ ಕ್ರಿಯಾ ಶಕ್ತಿ ಕೂಡ ಮುಖ್ಯ ಎಂದರು.

ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಶಕ್ತಿ, ಆಧ್ಯಾತ್ಮಿಕ ಶಕ್ತಿ ಪ್ರಗತಿಯಾಗುತ್ತದೆ. ಸ್ವ ಸಹಾಯ ಸಂಘಗಳು ಗೋವಿನ ಉತ್ಪನ್ನಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನ ಸಮಾಜದ ಜ್ವಲಂತ ಸಮಸ್ಯೆಯಾಗಿದೆ. ದಂಪತಿಗಳಿಗೆ ಜೀವನದ ಮಹತ್ವ ಅರಿಕೆ ಮಾಡಬೇಕಿದೆ. ಹೀಗಾಗಿ, ದಂಪತಿಗಳ ಶಿಬಿರಗಳಿಗೆ ಸ್ವ ಸಹಾಯ ಸಂಘಗಳ ಸದಸ್ಯರು ಹೆಚ್ಚಿನ ಜನರನ್ನು ಕಳಿಸಬೇಕು ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮಠಮಾನ್ಯಗಳೆಂದರೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಸಮಾಜದ ಅಭಿವೃದ್ಧಿಗೆ ಸ್ವರ್ಣವಲ್ಲೀ ಶ್ರೀಗಳ ಕೊಡುಗೆ ಅಪಾರ. ಸ್ವ ಸಹಾಯ ಸಂಘಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರೀಗಳು ಶ್ರಮಿಸುತ್ತಿದ್ದಾರೆ. ಪಡೆದ ಸಾಲ ಪಡೆದ ಉದ್ದೇಶಕ್ಕೆ ಬಳಸಿದರೆ ಮಾತ್ರ ಪ್ರಗತಿ ಸಾಧ್ಯ. ದುಡಿಯುವ ಕೈಗಳಿಗೆ ಕೆಲಸ ಬೇಕಾಗಿದೆ. ನಮ್ಮಲ್ಲಿ ಸಂಪನ್ಮೂಲಗಳಿವೆ. ಸ್ವ ಸಹಾಯ ಸಂಘಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಗುಣಮಟ್ಟದ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದರು.

ಎಂ.ಸಿ. ಹೆಗಡೆ ಶಿರಸಿಮಕ್ಕಿ, ಎಲ್.ಎಂ. ಹೆಗಡೆ, ವಿ.ಎಂ. ಹೆಗಡೆ ಇತರರಿದ್ದರು. ಇದೇ ವೇಳೆ ಸಾಧಕ ಸ್ವ ಸಹಾಯ ಸಂಘಗಳಿಗೆ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net