ಸ್ವಾವಲಂಬಿ ಬದುಕಿಗೆ ಸುವಾಸನೆ ತಂದ ಅಗರಬತ್ತಿ

EMPLOY
ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿರುವ ದೀಪಾ ಸಜ್ಜನ್ ಅವರ ಅಗರಬತ್ತಿ ತಯಾರಿಕಾ ಘಟಕ.
Published on

ಅಶೋಕ ಬೆನ್ನೂರು ಸಿಂಧನೂರು: ವಳಗೇರಾ ಗ್ರಾಮದ ತೇರಿನಮನೆ ರಸ್ತೆಯಲ್ಲಿ ಘಮ ಘಮ ಸುವಾಸನೆ ಮೂಗಿಗೆ ರಾಚುತ್ತದೆ. ಈ ಪರಿಮಳ ಜವಳಗೇರಾಕ್ಕೆ ಸೀಮಿತವಾಗಿರದೆ ಬೆಂಗಳೂರು ಹಾಗೂ ಇತರ ನಗರಗಳಿಗೂ ಪಸರಿಸಿದೆ.

ಗ್ರಾಮದ ದೀಪಾ ಸಜ್ಜನ್ ಮತ್ತು ಅಮರೇಶ ಸಜ್ಜನ್ ದಂಪತಿ ಕಳೆದ ಆರು ವರ್ಷಗಳಿಂದ ಜವಳಗೇರಾದಲ್ಲಿ ಅಗರಬತ್ತಿ ತಯಾರಿಕಾ ಘಟಕ ಮುನ್ನಡೆಸುತ್ತಿದ್ದಾರೆ. ಮಾಲೀಕರಾಗಿದ್ದರೂ ಕಾರ್ಮಿಕರಾಗಿ ದುಡಿಯುವ ಈ ದಂಪತಿಗೆ ಗೃಹ ಉದ್ಯಮ ಯಶಸ್ಸು ತಂದುಕೊಟ್ಟಿದೆ.

ಇದನ್ನೂ ಓದಿ: ರೈತರಿಗೆ ಸುವಾಸನೆ ಬೀರಿದ ಅಜಿವಾನ್
ಸ್ವಯಂ ಉದ್ಯೋಗ ಆರಂಭಿಸುವ ಯೋಚನೆಯಲ್ಲಿದ್ದ ದೀಪಾ ಸಜ್ಜನ್, ಟಿವಿಯಲ್ಲಿ ಬಿತ್ತರಗೊಳ್ಳುತ್ತಿದ್ದ ಅಗರಬತ್ತಿ ತಯಾರಿಕೆ ಜಾಹೀರಾತಿನಿಂದ ಪ್ರೇರಣೆಗೊಂಡು ಘಟಕ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಒಂದು ತಿಂಗಳು ತರಬೇತಿ ಪಡೆದಿದ್ದಾರೆ. ಎರಡು ಲಕ್ಷ ರೂ. ಬಂಡವಾಳ ಹೂಡಿ, ಅಗರಬತ್ತಿ ತಯಾರಿಸುವ ಎರಡು ಯಂತ್ರ ಅಳವಡಿಸಿದ್ದರು. ಬೇಡಿಕೆ ಹೆಚ್ಚಿದ್ದರಿಂದ 10 ಯಂತ್ರಗಳನ್ನು ಅಳವಡಿಸಿದ್ದು, 15 ಜನಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಿನವೊಂದಕ್ಕೆ 400ರಿಂದ 500 ಕೆಜಿ ಊದುಬತ್ತಿ ತಯಾರಾಗುತ್ತಿವೆ. ಘಟಕದಲ್ಲಿ 15 ಮಹಿಳೆಯರಿಗೆ ಕೆಲಸ ಸಿಕ್ಕಿದೆ. ದೀಪಾ ಸಜ್ಜನ್ ಅಗರಬತ್ತಿ ತಯಾರಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೆ, ಅವರ ಪತಿ ಅಮರೇಶ ಸಜ್ಜನ್ ಕಚ್ಚಾ ಸಾಮಾಗ್ರಿ ತರಿಸುವ ಜವಾಬ್ದಾರಿ ಹೊತ್ತಿದ್ದಾರೆ. ಇದ್ದಿಲು ಮಿಶ್ರಿತ ಮರದ ಹೊಟ್ಟು, ಜಿಗುಟು, ಕಡ್ಡಿ ಮತ್ತು ವಿವಿಧ ದ್ರವ್ಯಗಳನ್ನು ಖರೀದಿಸಲಾಗುತ್ತದೆ.

ಇಲ್ಲಿ ತಯಾರಾಗುವ ಅಗರಬತ್ತಿಗೆ ಗುಣಮಟ್ಟ ಆಧಾರಿಸಿ ದರ ನಿಗದಿಪಡಿಸಲಾಗಿದೆ. ಈ ಹಿಂದೆ ಬೆಂಗಳೂರು ಸೇರಿ ಇತರ ನಗರಗಳ ಅಂಗಡಿಗಳಿಗೆ ಉತ್ಪನ್ನ ಮಾರಾಟ ಮಾಡಲಾಗುತ್ತಿತ್ತು. ಈಗ ಸಿಂಧನೂರಿನ ಕಂಪನಿಯೊಂದರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ದೀಪಾ ಸಜ್ಜನ್ ದಂಪತಿ ತಿಂಗಳಿಗೆ 1 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ಬೆಂಕಿ ತಂದ ನಷ್ಟ

ಕಳೆದ 20 ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿಯಿಂದ ಅಗರಬತ್ತಿ ಹಾಗೂ ಇತರ ಸಾಮಾಗ್ರಿಗಳು ಸುಟ್ಟಿದ್ದರಿಂದ ನಷ್ಟ ಅನುಭವಿಸಿದ್ದಾರೆ. ವಸ್ತುಗಳು ಬೆಂಕಿಗಾಹುತಿಯಾದ ಸ್ಥಳದ ಪಕ್ಕದಲ್ಲಿ ಹೊಸ ಶೆಡ್ ನಿರ್ಮಿಸಿಕೊಂಡು ದೀಪಾ ಸಜ್ಜನ್ ದಂಪತಿ ಉದ್ಯಮ ಮುಂದುವರಿಸಿದ್ದಾರೆ.

ಅಗರಬತ್ತಿ ತಯಾರಿಕಾ ಘಟಕ ಆರಂಭಿಸುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಈಗ ಗೃಹ ಉದ್ಯಮದಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಸ್ವಾವಲಂಬಿ ಬದುಕಿಗೆ ನೆರವಾಗಿರುವ ಘಟಕವನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಆದರೆ ಆರ್ಥಿಕ ಸಹಾಯ ಸಿಗುತ್ತಿಲ್ಲ. ಯಾವ ಬ್ಯಾಂಕ್‌ಗಳಿಂದಲೂ ಸಹಕಾರ ಸಿಗುತ್ತಿಲ್ಲ.


ದೀಪಾ ಅಮರೇಶ ಸಜ್ಜನ್


ಅಗರಬತ್ತಿ ತಯಾರಿಕಾ ಘಟಕದ ಮಾಲಕಿ, ಜವಳಗೇರಾ (ಮೊ.ಸಂ.8904893087) (ಫೋಟೊ ಇದೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net