ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಯುವ ಶಕ್ತಿಯ ಸದ್ಬಳಕೆಯಾಗಲಿ: ಬಿ.ವೈ.ವಿಜಯೇಂದ್ರ ಅಭಿಮತ

ctd 14 sharna sene logo
Published on

ಚಿತ್ರದುರ್ಗ: ಭಾರತ ಸ್ವಾಭಿಮಾನಿ, ಸ್ವಾವಲಂಬಿ ದೇಶವಾಗಬೇಕೆಂಬ ಪ್ರಧಾನಿ ಕನಸು ನನಸು ಮಾಡಲು, ಯುವ ಶಕ್ತಿಯ ಸದ್ಬಳಕೆಗಾಗಿ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಶರಣ ಸೇನೆ ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಮುರುಘಾ ಮಠದಲ್ಲಿ ಭಾನುವಾರ ಸಂಘಟನೆಗೆ ಚಾಲನೆ ನೀಡಿ ಮಾತನಾಡಿ, ಸಮಾಜದ ಎಲ್ಲ ವರ್ಗದ ಯುವ ಜನರಿರುವ ಈ ಸಂಘಟನೆ ರಾಜ್ಯಾದ್ಯಂತ ವಿಸ್ತರಣೆಯಾಗಬೇಕು. ರಾಜ್ಯದಲ್ಲಿ ಮುಂದೆ ಬರುವ ಯಾವುದೇ ಸವಾಲು ಎದುರಿಸುವ ಶಕ್ತಿ ಗಳಿಸಿಕೊಳ್ಳಬೇಕು ಎಂದರು.

ವಿವೇಕಾನಂದ, ಸುಭಾಸ್‌ಚಂದ್ರ ಬೋಸ್, ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವ ಶಕ್ತಿಯ ಬಗ್ಗೆ ಅಪಾರ ನಂಬಿಕೆ ಇದೆ. ಇಂಥ ಯುವಶಕ್ತಿ ಹಿಂಸೆಯಂತಹ ಚಟುವಟಿಕೆಯಲ್ಲಿ ತೊಡಗದೇ, ಅದನ್ನು ಸರಿದಾರಿಗೆ ಕೊಂಡೊಯ್ಯಲು ಸಂಘಟನೆ ಸದಸ್ಯರು ಶ್ರಮಿಸಲಿ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸಂಘಟನೆಯಲ್ಲಿ ಶಕ್ತಿ ಇದೆ. ಅಧಿಕಾರ, ಅಂತಸ್ತು ಶಾಶ್ವತ ವಲ್ಲ. ಜಗತ್ತನ್ನು ವಿಚಾರ ಆಳಿದರೆ, ಭಾರತವನ್ನು ಅಂಬೇಡ್ಕರ್‌ರಚಿತ ಸಂವಿಧಾನ ಆಳುತ್ತಿದೆ ಎಂದರು.

ಮೀಸಲು ಹೇಗೆ ಸಾಧ್ಯ?

ಮಠಾಧೀಶರು ಅನ್ನ, ಜ್ಞಾನದಾಸೋಹಕ್ಕೆ ಆದ್ಯತೆ ಕೊಡಬೇಕು. ಆದರೆ ಕೆಲವರು ಮೀಸಲಾತಿ ವಿಚಾರದಲ್ಲಿ ಬೀದಿಗೆ ಇಳಿದಿದ್ದಾರೆ. ಎಲ್ಲರಿಗೂ ಮೀಸಲಾತಿ ಕೊಡಲು ಹೇಗೆ ಸಾಧ್ಯವೆಂದು ಶರಣರು ಪ್ರಶ್ನಿಸಿದರು. ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಇದ್ದೇ ಇರುತ್ತಾರೆ. ಅಪಾಯಕಾರಿಯಾದ ಈ ಒಡಲುರಿಯನ್ನು ನಂದಿಸುವ ದಾರ್ಶನಿಕರ ಕೆಲಸವನ್ನು ನಾವು ಮುಂದುವರಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net