ಸಮಾಜ ಸೇವೆಯಿಂದ ಆತ್ಮ ತೃಪ್ತಿ

Self-satisfaction from social service
ಜಮಖಂಡಿಯ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ವಚನ ಶ್ರಾವಣ ಅಂಗವಾಗಿ ಹಂಚಿನಾಳ ಪ್ಲಾಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದ ದೇವರು ಶ್ರೀಗಳು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಸಪ್ಪ ಕಾಗವಾಡ, ಡಾ.ಟಿ.ಪಿ. ಗಿರಡ್ಡಿ ಇತರರು ಇದ್ದಾರೆ.
Published on

ಜಮಖಂಡಿ: ಮರದ ಬಾಯಿ ಬೇರು. ಬೇರಿಗೆ ನೀರು ಹಾಕಿದ್ದರಿಂದಲೇ ಮರ ಹಣ್ಣು ಕೊಡುತ್ತದೆ. ಹಾಗೆಯೇ ಇಷ್ಟಲಿಂಗದ ಬಾಯಿ ಸಮಾಜ. ಸಮಾಜಸೇವೆ ಮಾಡಿದರೆ ದೇವರ ಕರುಣೆ ಮತ್ತು ಸಹಾನುಭೂತಿಗೆ ಪಾತ್ರರಾಗಲು ಸಾಧ್ಯ ಎಂದು ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಹಂಚಿನಾಳ ಪ್ಲಾಟ್‌ನಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಬಸವಣ್ಣನವರ ವಚನ ಆಧರಿತ ಮರದ ಬಾಯಿ ಬೇರು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ತಮಗಾಗಿ ಬದುಕಿದವರನ್ನು ಸಮಾಜ ಸ್ಮರಿಸುವುದಿಲ್ಲ. ಯಾರೂ ಸಮಾಜಸೇವೆಗಾಗಿ ಬದುಕಿರುತ್ತಾರೋ ಅವರನ್ನು ಮಾತ್ರ ಸ್ಮರಿಸುತ್ತದೆ. ಮಹಾತ್ಮ ಗಾಂಧೀ, ಬುದ್ಧ, ಮಹಾವೀರ ಇವರಾರೂ ರಕ್ತ ಸಂಬಂಧಗಳಲ್ಲ. ಆದರೂ ಅವರನ್ನು ಸಮಾಜ ಸ್ಮರಿಸುತ್ತದೆ ಎಂದರು.

ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಇನ್ನೊಬ್ಬರಿಗೆ ಉಪಕಾರ ಮಾಡುವ ಕಾರ್ಯ ಮಾಡಿದರೆ ಭಗವಂತ ಒಲಿಯುತ್ತಾನೆ. ಇನ್ನೊಬ್ಬರ ಮುಖದಲ್ಲಿ ನಗು ಬರಿಸಬೇಕು. ಇನ್ನೊಬ್ಬರ ಭಾವನೆಗಳು ಅರಳುವಂತೆ ಮಾಡಿದರೆ ಭಗವಂತನ ಸಾಕ್ಷಾತ್ಕಾರ ಆಗುತ್ತದೆ ಎಂದು ಆಶೀರ್ವಚನ ನೀಡಿದರು.

ಹಿರಿಯರಾದ ಗಿರಮಲ್ಲಪ್ಪ ಹಂಚಿನಾಳ, ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಕೇಶವ ರಾಠೋಡ, ಪಶು ವೈದ್ಯ ಡಾ.ಹನಮಂತ ಬಟಕುರ್ಕಿ ಇದ್ದರು. ಪರಮಾನಂದ ಹಲಗಣ್ಣವರ ಹಾಗೂ ಕುಟುಂಬ ವರ್ಗದವರು ಮಹಾಪ್ರಸಾದ ಸೇವೆ ಸಲ್ಲಿಸಿದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪುರ ಸಂಗೀತ ಸೇವೆ ಸಲ್ಲಿಸಿದರು. ಬಸಪ್ಪ ಕಾಗವಾಡ ಸ್ವಾಗತಿಸಿದರು. ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರಕಾಶ ಮುಂದಿನಮನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net