

ಮಡಿಕೇರಿ: ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಿಂದ ಮಾತ್ರ ಆತ್ಮತೃಪ್ತಿಯನ್ನು ಹೊಂದಲು ಸಾಧ್ಯವೆಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀಸುತ ಬಳಗದ ವತಿಯಿಂದ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚಿ.ನಾ.ಸೋಮೇಶ್ ಅವರಿಂದ ರಚಿಸಲ್ಪಟ್ಟ ’ಅಗ್ನಿಪಥ’ ಕೃತಿ ಅನಾವರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಭಾವನೆಗಳನ್ನು ಸಾಹಿತಿಯಾದಾತ ಬರಹದ ಮೂಲಕ ಹೊರ ತರುವ ಮೂಲಕ ಓದುಗರ ಮನಸ್ಸನ್ನು ಚಿಂತನೆಗೆ ಹಚ್ಚಿ ಆತ್ಮತೃಪ್ತಿಯನ್ನು ಪಡೆದುಕೊಳ್ಳುತ್ತಾನಾದರೆ, ಸಂಗೀತಗಾರ ತನ್ನ ಸಂಗೀತದ ಮೂಲಕ ಕೇಳುಗರ ಮನಸ್ಸನ್ನು ಸೂರೆಗೊಂಡು ಸಂತೋಷ ಪಡುತ್ತಾನೆಂದು ತಿಳಿಸಿದರು.
ಚಿ.ನಾ.ಸೋಮೇಶ್ ಅವರು ರಾಷ್ಟ್ರ ಚಿಂತನೆಯ ವಿಷಯಗಳಿಗೆ ಮುಖವಾಣಿಯಾಗಿ, ರಾಷ್ಟ್ರದೆಡೆಗಿನ ತಮ್ಮ ಕಾಳಜಿಯನ್ನು ಬರಹರೂಪಕ್ಕಿಳಿಸಿದ್ದು, ಅವರ ಕಾಳಜಿಯನ್ನು ಅಗ್ನಿಪಥದಲ್ಲಿ ಕಾಣಬಹುದು. ಸರ್ವರಲ್ಲಿಯೂ ಸಾಮಾಜಿಕ ಪ್ರಜ್ಞೆ, ರಾಷ್ಟ್ರಾಭಿಮಾನಗಳು ಮೂಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲು ಸಾಧ್ಯ. ಅಂತಹ ಚಿಂತನೆಗಳು ಬರಹದಲ್ಲಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಎಳೆಯ ಮನಸ್ಸುಗಳಲ್ಲಿ ಇಂದು ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲ ತಾಣದ ಗೀಳು ಹೆಚ್ಚಿದೆ. ಈ ಹಿನ್ನೆಲೆ ಯುವ ಮನಸುಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು, ರಾಷ್ಟ್ರೀಯ ಚಿಂತನೆಗಳನ್ನು ಮೂಡಿಸಲು ಇಂತಹ ಕೃತಿಗಳು ಪ್ರಮುಖವೆನಿಸಿಕೊಳ್ಳುತ್ತದೆಫಂದು ಅಭಿಪ್ರಾಯಿಸಿದರು.
ಚಿ.ನಾ. ಸೋಮೇಶ್ ಅವರು ರಚಿಸಿದ ಅಗ್ನಿಪಥ ಕೃತಿಯನ್ನು ಕೂಡಿಗೆ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಅನಾವರಣಗೊಳಿಸಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಜಾಲತಾಣಗಳ ಗಾಢ ಪ್ರಭಾವದಿಂದ ಯುವ ಸಮೂಹ ಸಾಹಿತ್ಯ ಲೋಕದಿಂದ ಸಾಕಷ್ಟು ದೂರ ಸರಿದಿದೆ. ಅವರನ್ನು ಮತ್ತೆ ಸಾಹಿತ್ಯದತ್ತ ಆಸಕ್ತರನ್ನಾಗಿ ಮಾಡಲು ಇಂತಹ ಕೃತಿಗಳು, ಅದರಲ್ಲೂ ಇಂದಿನ ವೇಗದ ಯುಗಕ್ಕೆ ಅನ್ವಯವಾಗುವಂತೆ ಸಣ್ಣ ಸಣ್ಣ ಕವನಗಳ ರೂಪದ ಸಾಹಿತ್ಯ ಅತ್ಯಂತ ಸಹಕಾರಿಯಾಗಬಲ್ಲುದೆಂದು ಅಭಿಪ್ರಾಯಿಸಿದರು.
ಸಾಹಿತ್ಯ ಕ್ಷೇತ್ರ ಅತ್ಯಂತ ವಿಶಾಲವಾದುದಾಗಿದ್ದರು, ಅದರೆಡೆಗಿನ ಒಲವು ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ಸಾಹಿತ್ಯ ಪುಸ್ತಕಗಳನ್ನು ಹೆಚ್ಚು ಹೆಚ್ಚಾಗಿ ಓದುವ ಪ್ರವೃತ್ತಿಯನ್ನು ಯುವ ಸಮೂಹದಲ್ಲಿ ಪ್ರೇರೇಪಿಸುವ ಕಾರ್ಯ ನಡೆಯಲೆಂದು ಆಶಿಸಿದರು.
ಈ ಸಂದರ್ಭ ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಮಾತನಾಡಿ, ವಿನಯವಿದ್ದಾಗ ಮಾತ್ರ ವಿಧ್ಯೆಗೆ ಮಹತ್ವ ಬರುತ್ತದೆ. ನಾವು ಎಂದಿಗೂ ಇನ್ನೊಬ್ಬರಲ್ಲಿ ದೋಷವನ್ನು ಎಣಿಸುವುದು ತಪ್ಪೆಂದು ಅಭಿಪ್ರಾಯಿಸಿ, ನಮ್ಮ ಬೆನ್ನೇ ನಮಗೆ ಕಾಣದಿರುವಾಗ ನಾವು ಹಂಸ ಕ್ಷೀರ ನ್ಯಾಯದಂತೆ ಕೆಸರಿನಲ್ಲಿದ್ದರೂ ಅದರ ಸೋಂಕಿಲ್ಲದೆ ಬೆಳೆಫಯುವ ತಾವರೆಯಂತೆ ಒಳಿತನ್ನು ಮಾತ್ರ ಇತರರಿಂದ ಸ್ವೀಕರಿಸುವ ಮನೋಭಾವವನ್ನು ಹೊಂದಬೇಕೆಂದು ಕಿವಿ ಮಾತುಗಳನ್ನಾಡಿದರು.
ಪ್ರಮುಖರಾದ ಮಚ್ಚಾರಂಡ ಮಣಿ ಕಾರ್ಯಪ್ಪ ಮಾತನಾಡಿ, ನಾವಿಂದು ಅಗ್ನಿ ಪಥದ ನಡುವೆಯೇ ಇದ್ದೇವೆಂದು ಅನಿಸಿಕೆ ವ್ಯಕಪಡಿಸಿ, ಜಾತಿ ಮತಗಳೊಂದಿಗೆ ಧರ್ಮವನ್ನು ಸೇರಿಸುವುದರಿಂದ ಕ್ಷೋಭೆಯ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಪ್ರಸ್ತುತ ಜಾತಿ, ಮತ, ಧರ್ಮಗಳ ನಡುವೆ ವ್ಯತ್ಯಾಸವೇ ಇಲ್ಲದಂತಾಗಿದೆ. ಧರ್ಮವೆಂದರೆ ಪ್ರತಿಫಲಾಪೇಕ್ಷೆಗಳಿಲ್ಲದ ಸೇವೆಯೇ ಆಗಿದೆ ಎಂದರು.
ಶ್ರೀಸುತ ಬಳಗದ ಪ್ರಮುಖರಾದ ಡಿ.ಎಚ್.ತಮ್ಮಪ್ಪ, ಕೃತಿಕಾರ ಚಿ.ನಾ.ಸೋಮೇಶ್, ಪ್ರಮುಖರಾದ ಗೀತಾ ಸಂಪತ್ ಕುಮಾರ್, ಕೆ.ಕೆ.ದಿನೇಶ್, ಸಂಪತ್ ಕುಮಾರ್, ಉಪನ್ಯಾಸಕಿ ಜಯಲಕ್ಷ್ಮೀ ಇತರರಿದ್ದರು.