

ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕುರಿತು ಸಾಂಬಶಿವ ಪ್ರಹಸನ ನಾಟಕದಲ್ಲಿ ಅವಹೇಳನ ಮಾಡಿರುವ ಕ್ರಮ ಖಂಡಿಸಿ ಹಾಗೂ ಅವಹೇಳನ ಮಾಡಿರುವವರನ್ನು ಬಂಧಿಸುವಂತೆ ಒತ್ತಾಯಿಸಿ ಸ್ವಾಭಿಮಾನಿ ಹೋರಾಟ ವೇದಿಕೆ ವತಿಯಿಂದ ಮಂಗಳವಾರ ಭಾರಿ ಪ್ರತಿಭಟನೆ ನಡೆಯಿತು.
ವೇದಿಕೆ ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾಲಯದ ಓವೆಲ್ ಮೈದಾನದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು, ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಖಂಡನಾ ಸಭೆ ನಡೆಸಿದರು. ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅಭಿಮಾನಿಗಳು, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹಾಗೂ ಸಾಂಬಶಿವ ಪ್ರಹಸನ ನಾಟಕದ ನಿರ್ದೇಶಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಶೇಖರ ಕಂಬಾರರ ಕೃತಿ ಆಧರಿಸಿದ ಸಾಂಬಶಿವ ಪ್ರಹಸನ ಅತ್ಯುತ್ತಮ ನಾಟಕವಾಗಿದ್ದು, ನಾಟಕದ ಒಳ್ಳೆಯ ಅಂಶಗಳನ್ನು ತಿರುಚಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ರಂಗಾಯಣದಲ್ಲಿ ನಾಟಕ ಪ್ರದರ್ಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಂಗಾಯಣದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ಅವಮಾನಿಸುವ ಕೆಲಸ ಮಾಡಲಾಗುತ್ತಿದೆ. ಬಡವರ ಹಸಿವನ್ನು ಅಣಕಿಸಲಾಗುತ್ತಿದೆ. ವೈದಿಕ ಪರಂಪರೆಯನ್ನು ಬಿತ್ತಿ, ಪ್ರಜಾಪ್ರಭುತ್ವವನ್ನು ಶಿಥಿಲ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಅಡ್ಡಂಡ ಕಾರ್ಯಪ್ಪ ಎಂಎಲ್‌ಸಿ ಅಗಬೇಕು ಎನ್ನುವ ಹಂಬಲ ಇಟ್ಟುಕೊಂಡು ಕಾಂಗ್ರೆಸ್ ಟೀಕಿಸುವ ಭರದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೂ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಮಾತನಾಡಿ, ಮೈಸೂರಿಗೆ ರಂಗಾಯಣವು ಸಾಕಷ್ಟು ಕೊಡುಗೆ ನೀಡಿದೆ. ಅಡ್ಡಂಡ ಕಾರ್ಯಪ್ಪ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ರಂಗಾಯಣವೀಗ ರಂಪಾಯಣವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ರಂಗಾಯಣ ಸಂಸ್ಥೆಯೊಂದಿಗೆ 20 ವರ್ಷಗಳಿಂದ ನನಗೆ ಒಡನಾಟವಿದೆ. ಜನಸಾಮಾನ್ಯರಿಗೆ ಅರಿವು ಮೂಡಿಸಿ, ಸಮಾಜದಲ್ಲಿ ಬದಲಾವಣೆ, ಜಾಗೃತಿ ತರುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿತ್ತು. ಈಗ ಹಾದಿ- ಬೀದಿಗಳಲ್ಲಿ ರಂಪ ಮಾಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆ ಇಲ್ಲದಿದ್ದರೆ ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಸಾವಿರಾರು ಜನರು ಹಸಿವಿನಿಂದಲೇ ಸಾವಿಗೀಡಾಗುತ್ತಿದ್ದರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಸಿದ್ದರಾಮಯ್ಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು. ಅಂತಹ ಯೋಜನೆ ಜಾರಿಗೆ ತಂದವರ ವಿರುದ್ಧ ನಾಟಕದಲ್ಲಿ ಕೀಳು ಮಟ್ಟದಲ್ಲಿ ಭಾಷೆ ಬಳಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಮಾತನಾಡಿ, ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಹಿರಿಯ ನಾಯಕರನ್ನು ತೇಜೋವಧೆ ಮಾಡಲು ಸಾವಿರಾರು ಕೋಟಿ ರೂ. ವ್ಯಯಿಸುತ್ತಿದೆ. ಬಿಜೆಪಿಯ ಈ ನಡೆಯ ವಿರುದ್ಧ ಹೋರಾಟ ನಡೆಸಿದ್ದೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಆಧರಿಸಿ ಈ ವಾರದಲ್ಲಿ ಸಿದ್ದು ನಿಜ ಕನಸುಗಳು ಕೃತಿ ಬಿಡುಗಡೆಗೊಳಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್, ಮಾಜಿ ಮೇಯರ್‌ಗಳಾದ ಪುಷ್ಪಲತಾ ಜಗನ್ನಾಥ್, ಚಿಕ್ಕಣ್ಣ, ಅಯೂಬ್‌ಖಾನ್, ಮೋದಾಮಣಿ, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕುರುಬರ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಪತ್ರಕರ್ತ ಟಿ.ಗುರುರಾಜ್, ಮುಖಂಡರಾದ ಹರೀಶ್‌ಗೌಡ, ವೆಂಕಟೇಶ್, ಗೋಪಿ ಇತರರು ಇದ್ದರು.