ಸ್ವ ಉದ್ಯೋಗದಿಂದ ಸ್ವಾವಲಂಬನೆ ಸಾಧ್ಯ

Self-reliance is possible through self-employment.
ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಶಾಸಕ ಸಿದ್ದು ಸವದಿ ಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿದರು. ನಗರಸಭಾಧ್ಯಕ್ಷೆ ವಿದ್ಯಾ ದಭಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಅರುಣ ಬುದ್ನಿ, ಪೌರಾಯುಕ್ತ ಜಗದೀಶ ಈಟಿ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಮಹಿಳೆಯರಿಗೆ ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

ನಗರಸಭೆ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರಸಭೆ ಸಾಮಾನ್ಯ ನಿಧಿ ಹಾಗೂ ರಾಜ್ಯ ಹಣಕಾಸು ಯೋಜನೆಯಡಿ 97 ಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಅವರು, ಸ್ವ ಉದ್ಯೋಗದಿಂದ ಸ್ವಾವಲಂಬನೆ ಸಾಧ್ಯ ಎಂದರು.

ಕುಶಲಕರ್ಮಿಗಳು ಮತ್ತು ವಿವಿಧ ರೀತಿಯ ಸಾಂಪ್ರದಾಯಿಕ ಪದ್ಧತಿಯಲ್ಲಿ ಕಲಿತವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಸಾಲ ಪಡೆದು ಆರ್ಥಿಕವಾಗಿ ಮುನ್ನಡೆಯಲು ಅವಕಾಶ ನೀಡಲಾಗಿದೆ. 18ಕ್ಕೂ ಹೆಚ್ಚು ಬಗೆಯ ಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆಯಡಿ ಸಾಲಸೌಲಭ್ಯ ದೊರೆಯಲಿದೆ ಎಂದರು.

ಹೊಲಿಗೆ ಯಂತ್ರದ ಬದಲಿಗೆ ಈ ಭಾಗದ ಮುಖ್ಯ ವೃತ್ತಿಯಾದ ನೇಕಾರಿಕೆಗೆ ಸಂಬಂಧಿಸಿದ ಸಾಮಗ್ರಿ ಒದಗಿಸುವ ಅವಶ್ಯಕತೆಯಿದ್ದು, ಮಹಿಳೆಯರು ಬೇಡಿಕೆ ಸಲ್ಲಿಸಿದರೆ ಮುಂದಿನ ದಿನಗಳಲ್ಲಿ ನಗರಸಭೆಯಿಂದ ಒದಗಿಸಲಾಗುವುದು ಎಂದರು.

ತೇರದಾಳ ಕ್ಷೇತ್ರದಲ್ಲಿ ಕಳೆದ 2 ವರ್ಷಗಳಿಂದ ವಸತಿ ಯೋಜನೆಗಳಡಿ ಒಂದೂ ಮನೆಯನ್ನು ನೀಡಿಲ್ಲ. ಈ ಬಗ್ಗೆ ಬಜೆಟ್ ಕಲಾಪದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದರು.

ನಗರಸಭೆ ಅಧ್ಯಕ್ಷೆ ವಿದ್ಯಾ ದಭಾಡಿ ಮಾತನಾಡಿ, ಪೌರ ಕಾರ್ಮಿಕರ ವೇತನ ನಗರಸಭೆಯಿಂದಲೇ ನೀಡುತ್ತಿರುವುದರಿಂದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಹೆಚ್ಚಿನ ಅನುದಾನ ಅಥವಾ ಪೌರ ಕಾರ್ಮಿಕರಿಗೆ ನೇರ ವೇತನ ಒದಗಿಸಬೇಕು ಎಂದರು.

ಸಮಾರು 50ಕ್ಕೂ ಅಧಿಕ ಪೌರ ಕಾರ್ಮಿಕರಿಗೆ ಕಸ ನಿರ್ವಹಣೆಯ ಕಿಟ್ ವಿತರಿಸಲಾಯಿತು. ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಸ್ಥಾಯಿ ಸಮಿತಿ ಚೇರ್ಮನ್ ಅರುಣ ಬುದ್ನಿ, ಪೌರಾಯುಕ್ತ ಜಗದೀಶ ಈಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net