

ನೆಲಮಂಗಲ: ಮಹಿಳೆಯರು ಸಂಘಟಿತರಾದಾಗ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ ಎಂದು ವಾಲ್ಮೀಕಿ ಸೇನೆ ರಾಜ್ಯ ಅಧ್ಯಕ್ಷ ದಿಲೀಪ್‌ಕುಮಾರ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸ್ವಸಹಾಯ ಸಂಘ ಹಾಗೂ ವರಲಕ್ಷ್ಮಿ ಸ್ವಸಹಾಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ದಿನವಿಡೀ ದುಡಿಯುವ ಮಹಿಳೆಯರು ಪರೋಕ್ಷವಾಗಿ ರಾಷ್ಟ್ರದ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಸಮಾಜದಲ್ಲಿ ಹೆಣ್ಣಿಗೆ ಒಂದು ವಿಶೇಷ ಸ್ಥಾನಮಾನವಿದೆ. ಹೆಣ್ಣು ಈ ಜಗದ ಕಣ್ಣು ಎನ್ನುತ್ತಾರೆ. ಸಮಾಜದಲ್ಲಿ ಮಹಿಳೆಯ ಪಾತ್ರ ಅನನ್ಯ. ತಾಯಿ, ತಂಗಿ, ಮಡದಿಯಾಗಿ ಹೆಣ್ಣು ಸಕಲರಾಶಿಗಳ ಅಧಿದೇವತೆಯಾಗಿ ಪ್ರಥಮ ಸ್ಥಾನ ಗಳಿಸಿದ್ದಾಳೆ ಎಂದರು. ಬಿಜೆಪಿ ಎಸ್‌ಟಿ ಮೋರ್ಚಾ ತಾಲೂಕು ಅಧ್ಯಕ್ಷ ಕೆಂಪರಾಮಯ್ಯ ಮಾತನಾಡಿ, ಮಹಿಳೆ ಎಂದಾಕ್ಷಣ ನೆನಪಾಗುವುದು ತಾಯಂದಿರು. ಸಮಾಜದ ವಿವಿಧ ರಂಗಗಳಲ್ಲಿ ತೊಡಗಿಸಿ ಕೊಂಡಿರುವ ಮಹಿಳೆಯರು ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಹರಿಸಬೇಕು. ಮಹರ್ಷಿ ವಾಲ್ಮೀಕಿ ಸ್ವಸಹಾಯ ಸಂಘ ಅಧ್ಯಕ್ಷೆ ಪುಷ್ಪಲತಾ ಮಾತನಾಡಿ, ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದ್ದು, ವಿಜೇತ ಮಹಿಳೆಯರಿಗೆ ಬಹುಮಾನ ನೀಡಿ ಗೌರವಿಸಲಾಗಿದೆ ಎಂದರು.
ಮುಖಂಡ ಉಮೇಶ್, ಬೋರೇಗೌಡ, ಶ್ರೀಮಹರ್ಷಿ ವಾಲ್ಮೀಕಿ ಸ್ವಸಹಾಯ ಸಂಘದ ಉಪಾಧ್ಯಕ್ಷೆ ಯಮುನಾ, ಪ್ರೇಮಾ, ಅನಸೂಯ, ಭಾಗ್ಯಮ್ಮ, ವಸಂತಾ, ಲಕ್ಷ್ಮೀ, ಸರೋಜಾ, ರಾಧಾ, ದಿವ್ಯಾಶ್ರೀ, ರೇಣುಕಮ್ಮ, ರೂಪಾ, ಲಕ್ಷ್ಮಮ್ಮ, ಸುನೀತಾ ಇತರರು ಇದ್ದರು.