ಸರಿ, ತಪ್ಪು ಅರಿಯುವ ಶಕ್ತಿ ಬೆಳೆಸಿಕೊಳ್ಳಿ: ವಿದ್ಯಾರ್ಥಿನಿಯರಿಗೆ ಮೈಸೂರು ಡಿಸಿ ರಾಜೇಂದ್ರ ಕರೆ

Self protection training program was held at Mysore Maharani College
Published on

ಮೈಸೂರು: ಸಮಾಜದಲ್ಲಿ ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಅರಿತುಕೊಳ್ಳುವ ಶಕ್ತಿಯನ್ನು ವಿದ್ಯಾರ್ಥಿನಿಯರು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕರೆ ನೀಡಿದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ನಗರದ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ, ಕಿಶೋರ ಕಾರ್ಮಿಕತೆ ನಿಷೇಧ ಹಾಗೂ ನಿಯಂತ್ರಣ, ಮಾನವ ಕಳ್ಳ ಸಾಗಾಣೆ, ಭಿಕ್ಷಾಟನೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಾಗೂ ಸ್ವಯಂ ರಕ್ಷಣೆ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಾವು ಶಕ್ತಿವಂತರು ನಮ್ಮನ್ನು ಯಾರು ಶೋಷಣೆ ಮಾಡಲು ಸಾಧ್ಯವಿಲ್ಲ ಎಂದು ಬಲವಾಗಿ ನಂಬಬೇಕು. ಅಂತಹ ನಂಬಿಕೆ ಬಂದರೆ ನಿಮ್ಮನ್ನು ಶೋಷಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮಾನಸಿಕ ಶಕ್ತಿ ದೈಹಿಕ ಶಕ್ತಿಗಿಂತ ದೊಡ್ಡದ್ದು ಎಂಬುದನ್ನು ಅರ್ಥಮಾಡಿಕೊಳ್ಳಿ. ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕುರಿತು ಇಂದು ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ವಿದ್ಯಾರ್ಥಿನಿಯರು ಪ್ರತಿನಿತ್ಯ ಮನೆಯಲ್ಲಿ ಅಭ್ಯಾಸ ಮಾಡಿದರೆ ಮಾತ್ರ ತರಬೇತಿಯು ಸಾರ್ಥಕತೆ ಪಡೆಯಲು ಸಾಧ್ಯ. ಸ್ವಯಂ ರಕ್ಷಣಾ ತರಬೇತಿಯು ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುತ್ತದೆ. ಆದರೆ, ಅಂತಹ ಪರಿಸ್ಥಿತಿಯೇ ಬಾರದಂತೆ ನೋಡಿಕೊಳ್ಳುವುದು ಮುಖ್ಯ. ಹಾಗಾಗಿ ಶಕ್ತಿಗಿಂತ ಯುಕ್ತಿ ಅತ್ಯಂತ ಮುಖ್ಯ ಎಂದು ಹೇಳಿದರು.

ಡಿಸಿಪಿ ಎಂ. ಮುತ್ತುರಾಜ್ ಮಾತನಾಡಿ, ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಲು ಆಗದೆ ಇದ್ದರೆ ನೀವು ಬೇರೆ ಯಾರನ್ನು ರಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವುದನ್ನು ಕಲಿಯಿರಿ, ಅದು ಯುದ್ಧವಾಗಲಿ ಅಥವಾ ಜೀವನವಾಗಲಿ. ನಮ್ಮನ್ನು ಮತ್ತೊಬ್ಬರು ರಕ್ಷಿಸುತ್ತಾರೆ ಎಂದು ಕಾಯುತ್ತಾ ಕೂರಬೇಡಿ ಎಂದು ಕಿವಿಮಾತು ಹೇಳಿದರು.

ಮೊಬೈಲ್ ಅತಿಯಾಗಿ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಮೊಬೈಲ್ ಮೂಲಕವೇ ಅತಿಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಅಪರಿಚಿತರು ಕರೆ ಮಾಡಿ ನಿಮ್ಮ ಬಳಿ ಮಾಹಿತಿ ಕೇಳಿದಾಗ ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಸೈಬರ್ ಅಪರಾಧಿಗಳನ್ನು ಪತ್ತೆ ಹಚ್ಚುವುದು ಸುಲಭದ ಮಾತೇನು ಅಲ್ಲ. ಹಾಗಾಗಿ ಮೊಬೈಲ್‌ಅನ್ನು ಎಚ್ಚರಿಕೆಯಿಂದ ಬಳಕೆ ಮಾಡಿ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಡಿಸಿಪಿ ಜಾಹ್ನವಿ, ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್, ಕಾಲೇಜು ಪ್ರಾಂಶುಪಾಲ ಸೋಮಣ್ಣ, ಯೋಗ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಸಂಸ್ಥಾಪಕ ರಾಕೇಶ್ ಯಾದವ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net