ಸ್ವ ಸಹಾಯ ಸಂಘಗಳ ವಸ್ತು ಪ್ರದರ್ಶನಕ್ಕೆ ಚಾಲನೆ

5 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗ್ರಾಮೀಣ ಪ್ರದೇಶದ ಬಡ ಕುಟುಂಬದ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸಿ, ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಾಗೂ ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದೇ ನಮ್ಮ ಉದ್ದೇಶ ಎಂದು ಶಾಸಕ ಎನ್​.ಎಚ್​. ಕೋನರಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ಜಿಪಂ ಅತಿಥಿ ಗೃಹ ಆವರಣದಲ್ಲಿ ಸಂಜೀವಿನಿ ಯೋಜನೆಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಏರ್ಪಡಿಸಿರುವ ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸುವ ಗೃಹಪಯೋಗಿ ಮತ್ತು ಕರಕುಶಲ ವಸ್ತುಗಳ ಜಿಲ್ಲಾ ಮಟ್ಟದ ಪ್ರದರ್ಶನ, ಮಾರಾಟ ಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಮಹಿಳೆಯರಲ್ಲಿ ಉದ್ಯಮಶೀಲತೆ, ಕೌಶಲ ಬೆಳೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ವೈಯಕ್ತಿಕ ಉದ್ಯಮ ಹಾಗೂ ಗುಂಪುಗಳಿಂದ ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಪೂರೈಸಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ವಸ್ತು ಪ್ರದರ್ಶನ ಮಾರಾಟ ಮೇಳಕ್ಕೆ ಖಾಯಂ ಸ್ಥಳ ಒದಗಿಸಲು ಕ್ರಮವಹಿಸಲಾಗುವುದು ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿದರು. ಜಿಲ್ಲೆಯ 7 ತಾಲೂಕುಗಳ ಗ್ರಾಪಂ ಮಟ್ಟದ 34 ಸಂಜೀವಿನಿ ಮಹಿಳಾ ಒಕ್ಕೂಟಗಳ 59 ಉತ್ಪನ್ನಗಳನ್ನು ಮತ್ತು ಹು-ಧಾ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕೈಗಾರಿಕಾ ಇಲಾಖೆಯ 8 ಸಂಜೀವಿನಿ ಒಕ್ಕೂಟದ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ.

ಜಿಲ್ಲಾ ವ್ಯವಸ್ಥಾಪಕ ಮಹೇಶ ಪಾಟೀಲ, ವಿನೋದ ಗಾಮನಗಟ್ಟಿ, ತಾಲೂಕು ಅಧಿಕಾರಗಳು, ಒಕ್ಕೂಟದ ಪದಾಧಿಕಾರಿಗಳು, ಇತರರು ಇದ್ದರು.

ಜಿಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ ಸ್ವಾಗತಿಸಿದರು. ವಿನೋದ ಕಂಠಿ ನಿರೂಪಿಸಿದರು. ಉಪ ಕಾರ್ಯದಶಿರ್ ಬಿ.ಎಸ್​. ಮೂಗನೂರಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net