

ಕೆ.ಎಂ.ದೊಡ್ಡಿ: ಮಹಿಳಾ ಸ್ವಸಹಾಯ ಗುಂಪುಗಳ ಲೇವಾದೇವಿ ಸಂಘಗಳಾಗಿ ಮಾರ್ಪಟ್ಟು, ಸ್ಥಾಪಿತ ಉದ್ದೇಶಕ್ಕೆ ವಿಮುಖವಾಗಿ ಕಾರ್ಯನಿರ್ವಹಿಸುತ್ತಿವೆ. ಮಳವಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ವಿ.ಕೃಷ್ಣ ಕಳವಳವ್ಯಕ್ತಪಡಿಸಿದರು.
ಇಲ್ಲಿನ ಭಾರತೀ ಕಾಲೇಜು ಅರ್ಥಶಾಸ್ತ್ರ ವಿಭಾಗ, ಭಾರತೀ ಸ್ನಾತಕ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಭಾರತಿ ಪದವಿ ಪೂರ್ವ ಕಾಲೇಜು ಮತ್ತು ಐಕ್ಯುಎಸಿ ಸಹಯೋಗದೊಂದಿಗೆ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಮಹಿಳಾ ಸಬಲೀಕರಣದ ಮೇಲೆ ಕಿರುಬಂಡವಾಳ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕ ನೆಲೆಯಲ್ಲಿ ಸ್ವಸಹಾಯ ಗುಂಪುಗಳು ರೂಪಗೊಂಡು ಅನುತ್ಪಾದಕ ಚಟುವಟಿಕೆಗಳಿಗೆ ಸಂಪನ್ಮೂಲ ಬಳಕೆ ಆಗುವುದನ್ನು ತಡೆಗಟ್ಟಿ, ವೃತ್ತಿ ಆಧಾರಿತ ಉತ್ಪನ್ನದಾಯಕ ಚಟುವಟಿಕೆಗಳಿಗೆ ಕಿರು ಹಣಕಾಸು ಸಂಸ್ಥೆಗಳ ಸಾಲ ಸೌಲಭ್ಯ ಪೂರೈಕೆ ಆಗುವಂತೆ ಆಗಬೇಕು. ಪ್ರತಿಯೊಬ್ಬರೂ ಪ್ರಶ್ನೆ ಮಾಡುವ ಮನೋಧರ್ಮವನ್ನು ರೂಪಿಸಿಕೊಳ್ಳಬೇಕು ಪ್ರತಿಪಾದಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಎಂ. ನಾಗರಾಜೇಗೌಡ ಮಾತನಾಡಿ, ಮಹಿಳಾ ಸಬಲೀಕರಣದ ಪ್ರಯೋಜನಗಳು ಸ್ವಸಹಾಯ ಗುಂಪುಗಳಿಗೆ ಲಭ್ಯವಾಗಬೇಕಾದರೆ ಪ್ರತಿಯೊಬ್ಬ ಮಹಿಳೆಯರು ಆರ್ಥಿಕ ಸಾಕ್ಷರತೆ ಹೊಂದಬೇಕು, ಆತ್ಮ ಸಮಾಲೋಚನೆಯ ಮೂಲಕ ಮಹಿಳಾ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಬೇಕು. ಕಿರು ಹಣಕಾಸು ಸಂಸ್ಥೆಗಳ ದುಬಾರಿ ಬಡ್ಡಿ ದರದ ಮೋಸದ ಜಾಲಕ್ಕೆ ಮಹಿಳಾ ಸ್ವಸಹಾಯ ಗುಂಪುಗಳು ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.
ಬ್ಯಾಂಕ್‌ಗಳು ಮತ್ತು ಸರಕಾರದ ವಿವಿಧ ಯೋಜನೆಗಳಲ್ಲಿ ಮಹಿಳೆಯರಿಗೆ ಲಭ್ಯವಾಗುವ ಆಧಾರ ರಹಿತ ಸಾಲದ ಪ್ರಯೋಜನಗಳು ಅರ್ಹ ಫಲಾನುಭವಿಗಳಿಗೆ ಲಭ್ಯವಾಗುವಂತೆ ಆಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಎಸ್.ಮಹದೇವಸ್ವಾಮಿ ವಹಿಸಿದ್ದರು. ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನೆ ಕೇಂದ್ರದ ನಿರ್ದೇಶಕರು ಮತ್ತು ಡೀನ್ ಪ್ರೊ.ಎಸ್.ನಾಗರಾಜ, ಅರ್ಥಶಾಸ್ತ ವಿಭಾಗದ ನಿವೃತ್ತ ಮುಖ್ಯಸ್ಥ ಎಂ.ಪುಟ್ಟಸ್ವಾಮಿಗೌಡ, ಐಕ್ಯುಎಸಿ ಸಂಯೋಜಕರಾದ ಡಾ. ಎಂ.ಪಿ ತೇಜೇಶ್ ಕುಮಾರ್, ಎ.ಎಸ್. ಸಂಜೀವ್, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಕಳ್ಳಿಮೆಳ್ಳೆದೊಡ್ಡಿ ಪ್ರಸನ್ನಕುಮಾರ್, ಸಂಚಾಲಕರಾದ ಎಚ್.ಕೆ.ದೊಡ್ಡಯ್ಯ, ಹನುಮಂತೇಗೌಡ, ಎ.ಎಸ್. ಪ್ರಶಾಂತಿನಿ, ಎಸ್. ಚಂದ್ರಶೇಖರ್ ಇತರರು ಇದ್ದರು.