

ಹೊಸಪೇಟೆ: ವಿಮುಕ್ತ ದೇವದಾಸಿಯರ ಮಾಸಿಕ ಸಹಾಯ ಧನವನ್ನು 5ಸಾವಿರ ರೂ.ಗೆ ಹೆಚ್ಚಳ ಸೇರಿ ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಅದನ್ನು ವಿಸ್ತರಿಸಬೇಕು ಎಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಅಪರ ಡಿಸಿ ಅನುರಾಧ ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಕುರಿತು ಮನವಿ ಸಲ್ಲಿಸಿ, ವಿಮುಕ್ತ ದೇವದಾಸಿಯರನ್ನು ಗುರುತಿಸಲು ಮತ್ತೊಮ್ಮೆ ಸರ್ವೇ ನಡೆಸಿ, ಹಿಂದಿನ ಗಣತಿಯಲ್ಲಿ ಬಿಟ್ಟು ಹೋದವರನ್ನು ಸೇರ್ಪಡೆಗೊಳಿಸಬೇಕು ಮತ್ತು ಅವರ ಮಕ್ಕಳು,ಕುಟುಂಬದ ಸದಸ್ಯರನ್ನು ಗಣತಿ ಮಾಡಿ, ಅವರಿಗೂ ಪುನರ್ವಸತಿ ಕಲ್ಪಿಸಬೇಕು. ಮಕ್ಕಳು ಅಂತರ್ಜಾತಿ ಅಥವಾ ಸ್ವಜಾತಿಯಲ್ಲಿ ವಿವಾಹವಾದರೂ ಕನಿಷ್ಠ 5 ಲಕ್ಷ ರೂ. ಪ್ರೋತ್ಸಾಹ ಧನ ಕಲ್ಪಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ವಿಮುಕ್ತ ದೇವದಾಸಿಯರು ಮತ್ತು ಅವರ ಮಕ್ಕಳು ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳಲ್ಲಿ ಪಡೆದ ಸಾಲವನ್ನು ಬರ ಮತ್ತು ನೆರೆ ಹಿನ್ನೆಲೆ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿಯಲ್ಲಿ ಆಸಕ್ತಿ ಇರುವ ಮಹಿಳೆಯರು ಮತ್ತು ಮಕ್ಕಳಿಗೆ ತಲಾ 5 ಎಕರೆ ನೀರಾವರಿ ಜಮೀನು ನೀಡಬೇಕು. ಅದಕ್ಕಾಗಿ ಪ್ರತಿ ವರ್ಷ ಕನಿಷ್ಟ 500 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕು. ನಿವೇಶನ ರಹಿತರಿಗೆ ತಲಾ 80*80 ಚದರ ಅಡಿ ಸ್ಥಳದಲ್ಲಿ ಕನಿಷ್ಠ 7 ಲಕ್ಷ ರೂ. ಮೌಲ್ಯದ ಮನೆ ನಿರ್ಮಿಸಿಕೊಡಬೇಕು. ಉಳಿದ ಜಾಗೆ ಬಳಕೆಗೆ ಅಗತ್ಯ ಯೋಜನೆ ರೂಪಿಸಬೇಕು.
ಇದನ್ನೂ ಓದಿ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಿಂಪಡೆಯಿರಿ
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ಎಪಿಎಂಸಿ ತಿದ್ದುಪಡಿ ಕಾಯ್ದೆ 2020, ಜಾನುವಾರು ಹತ್ತೆ ನಿಷೇಧ ತಿದ್ದುಪಡಿ ಕಾಯ್ದೆ 2020 ಮತ್ತು ಎನ್‌ಇಪಿ ನೀತಿ ಹಿಂಪಡೆಯಬೇಕು. ವಿಮುಕ್ತ ದೇವದಾಸಿಯರ ಮಕ್ಕಳು ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯ ತರಬೇತಿ ಕಲ್ಪಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ತಲಾ 200 ದಿನಗಳನ್ನು ನಿಗದಿಗೊಳಿಸಿ, ಕೂಲಿಯನ್ನು 700 ರೂ. ನಿಗದಿಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಕೊಟ್ಟೂರು ತಾಲೂಕು ಕಾರ್ಯದರ್ಶಿ ರುದ್ರೇಶ, ಕೂಡ್ಲಿಗಿ ತಾಲೂಕು ಅಧ್ಯಕ್ಷೆ ವೆಂಕಮ್ಮ, ಹರಪನಹಳ್ಳಿ ತಾಲೂಕು ಅಧ್ಯಕ್ಷೆ ಎ.ಕೆ.ಹನುಮಕ್ಕ, ಹೊಸಪೇಟೆ ತಾಲೂಕು ಖಜಾಂಚಿ ಹಂಪಮ, ಹರಪನಹಳ್ಳಿ ತಾಲೂಕು ಕಾರ್ಯದರ್ಶಿ ಮಂಜುಳಾ ಪಾಲ್ಗೊಂಡಿದ್ದರು.