

ವಿಜಯಪುರ: ಯುವ ಜನತೆ ಸನ್ನಡತೆಯಿಂದ ನಡೆದರೆ ಎಚ್‌ಐವಿ ನಿಯಂತ್ರಿಸಲು ಸಾಧ್ಯವಿದೆ. ಯುವಶಕ್ತಿ ದೇಶದ ಸಂಪತ್ತು. ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಹೇಳಿದರು.
ನಗರದ ಗಾಂಧಿಚೌಕ್ ಬಳಿ ಇರುವ ಸಂತ ಅನ್ನಮ್ಮಾ ಚರ್ಚ್‌ನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ಸ್ವಯಂ ಸೇವಾ ಸಂಸ್ಥೆಗಳು, ಎನ್.ಎಸ್.ಎಸ್ ಘಟಕಗಳು, ರೆಡ್ ರಿಬ್ಬನ್ ಕ್ಲಬ್‌ಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಚ್‌ಐವಿ ಸೋಂಕಿತರಿಗೆ ಕಳಂಕ, ತಾರತಮ್ಯ ತಡೆಗಟ್ಟಲು ಹಾಗೂ ಅವರಿಗೆ ಕಾನೂನಿನ ನೆರವು ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಎಚ್‌ಐವಿ ಸೋಂಕಿತರು ಎದೆಗುಂದದೆ ಆತ್ಮ ಸ್ಥೈರ್ಯದಿಂದ ಜೀವ ಸಾಗಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಶ ಚವ್ಹಾಣ ಮಾತನಾಡಿ, ಹಲವಾರು ಕಾಯಿಲೆಗಳು ನಮ್ಮ ಮಧ್ಯೆದಲ್ಲಿ ಇವೆ. ಪ್ರತಿಯೊಂದು ಕಾಯಿಲೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಕೆಲವು ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಮುಖ ಮಾಡಲು ಸಾಧ್ಯವಿದೆ. ಜಿಲ್ಲೆಯಲ್ಲಿ ಮೊದಲಿಗಿಂತ ಎಚ್‌ಐವಿ ಹರಡುವ ಪ್ರಮಾಣ ಕಡಿಮೆಯಾಗಿದೆ. ಅದಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳು ಕಾರಣ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಮಾತನಾಡಿ, ರಾಜ್ಯ ಏಡ್ಸ್ ನಿಯಂತ್ರಣ ಘಟಕದಿಂದ ಎಚ್‌ಐವಿ ಸೋಂಕಿತರ ಸಲುವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪರೀಕ್ಷೆ ಮತ್ತು ಚಿಕಿತ್ಸೆ ಪ್ರತಿಯೊಬ್ಬರಿಗೂ ತಲುಪುವ ಹಾಗೆ ಕಾರ್ಯನಿರ್ವಹಿಸಲಾಗುತ್ತಿದೆ. ತಂದೆ-ತಾಯಿಯಿಂದ ಮಕ್ಕಳಿಗೆ ಎಚ್‌ಐವಿ ಹರಡುವುದನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ. ಅದಕ್ಕೆ ಕಾರಣ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಅಲ್ಲದೆ ಸೋಂಕಿತರು ಸಾಮಾಜಿಕ ಸವಲತ್ತು ಪಡೆದು ಸುಂದರ ಜೀವನ ನಡೆಸುವಂತಾಗಬೇಕು ಎಂದರು.
ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾಸ್ಪತ್ರೆ ಶಸ ಚಿಕಿತ್ಸಕ ಡಾ.ಎಸ್.ಎಲ್.ಲಕ್ಕಣ್ಣವರ್, ಸಂತ ಅನ್ನಮ್ಮಾ ಚರ್ಚ್‌ನ ಫಾದರ್ ಲಾರೆನ್ಸ್, ಬಿಎಲ್‌ಡಿಇ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಸಾಮಾಜಿಕ ಹೋರಾಟಗಾರ ಪೀಟರ್ ಅಲೆಗ್ಸಾಂಡರ್, ಗಂಗಯ್ಯ ಹಿರೇಮಠ, ಗೀತಾ ಗುತ್ತರಗಿಮಠ, ಬಾಬುರಾವ ತಳವಾರ, ರವಿ ಕಿತ್ತೂರ, ಕೆ.ಜಿ.ಶೀಲವಂತ ಹಾಗೂ ಉಜ್ವಲ, ಸಂಕಲ್ಪ, ನವಸ್ಪೂರ್ತಿ, ಜಾಗೃತಿ, ಕೆ.ಎಚ್.ಪಿ.ಟಿ - ಲಿಂಕ್ ವರ್ಕರ್ ಯೋಜನೆ, ಮಹಿಳಾ ವಿಶ್ವವಿದ್ಯಾಲಯ, ಅನೌಪಚಾರಿಕ ಶಿಕ್ಷಣ ಸಂಸ್ಥೆ, ನವಸಾನಿಧ್ಯ, ಸಂತ ಜೋಸ್ ಪ್ ವಿವಿಧ ಪದವಿ ಮಹಾವಿದ್ಯಾಲಯಗಳು, ಪಾರ್ಮಸಿ, ನರ್ಸಿಂಗ್ ಕಾಲೇಜು ಹಾಗೂ ಇಲಾಖೆಯ ಎಲ್ಲ ಸಿಬ್ಬಂದಿ ಭಾಗವಹಿಸಿದ್ದರು.