

ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಅಥವಾ ಉದ್ಯೋಗ ಪಡೆಯುವುದು ಕಷ್ಟಕರವಾಗಿದ್ದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಪಡೆದ ನಂತರ ಕೇವಲ ಉದ್ಯೋಗ ಆಕಾಂಕ್ಷಿಗಳಾಗಿ ಕಾಯದೇ ತಮ್ಮಲಿರುವ ಪ್ರತಿಭೆ, ಜಾಣ್ಮೆ, ಪ್ರಾವೀಣ್ಯತೆ, ನೈಪುಣ್ಯತೆ ಮತ್ತು ಸೃಜನಾತ್ಮಕ ಕಲೆ-ಕೌಶಲ್ಯಗಳನ್ನು ಬಳಸಿಕೊಂಡು ಜೀವನೋಪಾಯಕ್ಕೊಂದು ಸ್ವಯಂ ಉದ್ಯೋಗ ಕೈಗೊಳ್ಳಬೇಕು. ಆ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕೆಂದು ಎಂದು ಜಿಲ್ಲಾ ಕೌಶಲ್ಯಾವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಕುಂಬಾರ ಹೇಳಿದರು.
ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಕೌಶಲ್ಯಾವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಗುರುವಾರ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಮೂಲ ಕಸುಬು, ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಉದ್ಯೋಗ, ವ್ಯವಹಾರ, ವ್ಯಾಪಾರ, ಉದ್ಯಮ, ಸಣ್ಣ-ಗುಡಿ ಕೈಗಾರಿಕೆಗಳನ್ನು ಕೈಗೊಂಡು ಜೀವನೋಪಾಯಕ್ಕೊಂದು ಆರ್ಥಿಕ ಭದ್ರತೆ ಮತ್ತು ಸ್ವಾವಲಂಬನೆಯನ್ನು ಸಾಧಿಸಬೇಕೆಂದು ಸಲಹೆ ನೀಡಿದರು.
ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್. ಖೊದ್ನಾಪೂರ ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ವೃತ್ತಿಪರವಾದ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಬಲ್ಲ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಪೂರಕವಾದ ರೇಡಿಯೋ, ಟಿವ್ಹಿ ಹಾರ್ಡವೇರ್, ಕಸೂತಿ, ಫ್ಯಾಶನ್ ಡಿಜೈನ್, ಫುಡ್ ಪ್ರೊಸೆಸ್ಸಿಂಗ್, ಡೇಟಾ ಎಂಟ್ರಿ ಆಪರೇಟರ್ ಮತ್ತಿತರ ಉದ್ಯಮ ಸ್ಥಾಪಿಸಬೇಕೆಂದರು.
ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅಧ್ಯಕ್ಷತೆ ವಹಿಸಿದ್ದರು. ಸುನಂದಾ ಬಾಲಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ನಿರ್ದೇಶಕ ಮಹಾಂತೇಶ ಬಾಗೇವಾಡಿ ತರಬೇತಿ ನೀಡಿದರು. ವಸಂತ ಚವ್ಹಾಣ, ಡಾ. ದಿಗಂಬರ ಕುಲಕರ್ಣಿ, ಎಸ್.ಆರ್.ಡಬ್ಬಿ, ಡಾ. ಸಚ್ಚಿದಾನಂದ ಬಗಲಿ, ವಿಜಯ ಜಾಧವ, ಎಸ್.ಬಿ. ಹೆಬ್ಬಿ, ಡಾ. ಎಸ್.ಡಿ. ಬಿರಾದಾರ ಮತ್ತಿತರರಿದ್ದರು. ಪ್ರೊ. ಬಿ.ಎನ್. ಶಾಡದಳ್ಳಿ ನಿರೂಪಿಸಿದರು. ಅಭಿಷೇಕ ಜಾನೋಜಿ ಪ್ರಾರ್ಥಿಸಿದರು. ರೇಣುಕಾ ಅಗಸರ ವಂದಿಸಿದರು.