

ನರಗುಂದ: ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನಕ್ಕಾಗಿ ಗುಡಿ ಕೈಗಾರಿಕೆಗಳಂತಹ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಆಧುನಿಕ ಜೀವನದಲ್ಲಿ ಸ್ವಂತ ಶಕ್ತಿ ಮೇಲೆ ಜೀವನ ಕಟ್ಟಿಕೊಳ್ಳಲು ಸ್ವ-ಕೌಶಲ ಹೆಚ್ಚು ಪರಿಣಾಮಕಾರಿ ಎಂದು ತಾಪಂ ಇಒ ಎಸ್.ಕೆ. ಇನಾಮದಾರ ಹೇಳಿದರು.
ತಾಲೂಕಿನ ಸುರಕೋಡ ಗ್ರಾಮದಲ್ಲಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಹಾಗೂ ಎಸ್‌ಬಿಐ, ಅಗ್ರಿಕಲ್ಟರ್ ಸೈನ್ಸ್ ಫೌಂಡೇಷನ್, ಸುರಕೋಡ ಗ್ರಾಪಂ ಮಟ್ಟದ ಸಂಜೀವಿನಿ ಯೋಜನೆಯ ಮಹಿಳಾ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ 30 ದಿನಗಳ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಪಡೆದು ಜೀವನ ನಿರ್ವಹಿಸುವುದು ಸುಲಭದ ಮಾತಲ್ಲ. ಆದರೆ, ಸ್ವಂತ ಬುದ್ಧಿಬಲದ ಮೇಲೆ ವಿವಿಧ ಕೌಶಲಗಳನ್ನು ಕರಗತ ಮಾಡಿಕೊಡರೆ ಸ್ವಾವಲಂಬನೆಯಿಂದ ಜೀವನ ನಡೆಸಬಹುದು. ಗ್ರಾಮೀಣ ಮಹಿಳೆಯರು ನಗರ ಪ್ರದೇಶದ ಮಹಿಳೆಯರಂತೆ ವಿವಿಧ ಕೌಶಲಗಳಾದ ಹೊಲಿಗೆ, ಕಸೂತಿ, ಬಟ್ಟೆ ಸಿದ್ಧಪಡಿಸುವಿಕೆ, ಗುಡಿ ಕೈಗಾರಿಕೆಗಳಂತಹ ಕೌಶಲಗಳನ್ನು ಕಲಿತು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಉಪನ್ಯಾಸಕ ನವೀನ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ತಮ್ಮದೇ ಆದ ಕೌಶಲ ಕಲಿತಿರಬೇಕ ಎಂದರು. ಮೋಹನಕೃಷ್ಣ , ಸುಮಿತ್ರಾ ಹುಡೇದಮನಿ, ಮುರಳಿಮೋಹನ ಕೃಷ್ಣ, ಲಕ್ಷ್ಮಣ ಪೂಜಾರ ಇತರರಿದ್ದರು.