

ಕಲಾದಗಿ: ಗ್ರಾಮೀಣ ಭಾಗದ ಮಹಿಳೆಯರು ಉಪಕಸುಬಾಗಿ ಸ್ವ ಉದ್ಯೋಗ ಪ್ರಾರಂಭಿಸುವುದರಿಂದ ಕುಟುಂಬಕ್ಕೆ ಆರ್ಥಿಕ ನೆರವಿನೊಂದಿಗೆ ಸ್ವಾವಲಂಬಿಯಾಗಿ ಬದುಕು ನಿರ್ವಹಿಸಲು ಸಹಕಾರಿಯಾಗುತ್ತದೆ. ಈ ದಿಶೆಯಲ್ಲಿ ಮಹಿಳೆಯರು ಮುಂದೆ ಬರಬೇಕು ಎಂದು ಬಿವಿವಿ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಿ.ಎಸ್. ಅಂಗಡಿ ಹೇಳಿದರು.
ಸಮೀಪದ ಹಿರೇಶೆಲ್ಲಿಕೇರಿಯಲ್ಲಿ ಬಿವಿವಿ ಸಂಘ ಮಹೀಂದ್ರಾ ಬ್ಯಾಂಕ್, ಆರ್.ಸೆಟ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಅಗರಬತ್ತಿ ತಯಾರಿಕೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದು ಉದ್ಯೋಗದ ತಾಂತ್ರಿಕ ತರಬೇತಿಯೊಂದಿಗೆ ಸರ್ಕಾರ ಬ್ಯಾಂಕ್‌ಗಳ ಮುಖಾಂತರ ಸಾಲದ ಮೇಲೆ ಸಹಾಯ ಧನ ಒದಗಿಸುತ್ತಿದೆ. ಇದನ್ನು ಉತ್ತೇಜಿಸಲು ಬಾಗಲಕೋಟೆಯ ಬಿವಿವಿ ಸಂಘ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಎಂದರು.
ಬಿವಿವಿ ಸಂಘದ ಆರ್.ಸೆಟ್ ನಿರ್ದೇಶಕ ಶರಣಬಸಪ್ಪ ಹುಣ್ಣೂರ ಮಾತನಾಡಿ, ಉದ್ಯಮವನ್ನು ಯಶಸ್ವಿಯಾಗಿ ಆರಂಭಿಸುವವರಿಗೆ ಸಹಾಯಹಸ್ತ ನೀಡುವ ದೃಷ್ಟಿಯಿಂದ ಅಗರಬತ್ತಿ ತಯಾರಿಕೆ ಸೇರಿದಂತೆ 65 ಕ್ಕೂ ಹೆಚ್ಚೂ ಔದ್ಯೋಗಿಕ ಚಟುವಟಿಕೆಗಳ ತರಬೇತಿಯನ್ನು ಆರ್.ಸೆಟ್ ಸಂಸ್ಥೆಯಿಂದ ಗ್ರಾಮೀಣ ಭಾಗಗಳಲ್ಲಿ ಊಟ, ವಸತಿ ಸಹಿತ ಕಾರ್ಯಾಗಾರ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಿವಿವಿ ಸಂಘದ ಆರ್.ಸೆಟ್‌ನ ಬಾಬುರಾವ ಜಂಬಗಿ, ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ನಾಮನಿರ್ದೇಶಿತ ಸದಸ್ಯ ಕೀರಪ್ಪ ಮಾದರ, ಚನ್ನಬಸಪ್ಪ ನಂದಿ, ನಿತೀಶ ಪಾಟೀಲ, ಸಿಖಂದರ ಬಾವಾಖಾನ, ಮೆಹಬೂಬ ನದ್ಾ ಮತ್ತಿತರರಿದ್ದರು. ಕಾರ್ಯಕ್ರಮವನ್ನು ಪವಿತ್ರಾ ಜಕ್ಕಪ್ಪನವರ ನಿರ್ವಹಿಸಿದರು.