ಮಹಿಳಾ ಸ್ವಸಹಾಯ ಸಂಘಗಳ ಸ್ವ-ಉದ್ಯೋಗಕ್ಕೆ ಕಾಯಕ ಯೋಜನೆ ಸಹಕಾರಿ

7-klr-16
Published on

ಕೋಲಾರ: ಮಹಿಳಾ ಸ್ವಸಹಾಯ ಸಂಘಗಳ ಮೂಲಕವೇ ಸ್ವ-ಉದ್ಯೋಗ ಕೈಗೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳು ಮಹಿಳೆಯರಿಗೆ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಯಕ ಯೋಜನೆಯಡಿ ಬಡ ಮಹಿಳೆಯರು ಸ್ವಉದ್ಯೋಗ ಪ್ರಾರಂಭಿಸಲು ಅವಕಾಶಗಳಿರುವುದರಿಂದ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು.

ಮಾಲೂರು ತಾಲೂಕಿನ ಜೋಡಿಪುರದ ಮಹಾಲಕ್ಷ್ಮೀ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಮಂಜುಳಾ ಸಂಘದ ಸಹಾಯ ಪಡೆದು ಸ್ವ-ಉದ್ಯೋಗ ಆರಂಭಿಸಿ ಮಾದರಿಯಾಗಿದ್ದಾರೆ. ಅದರಂತೆ ಜಿಲ್ಲೆಯ ಇನ್ನಿತರರು ಕಾಯಕ ಯೋಜನೆಯಿಂದ ಸ್ವಾವಲಂಬಿಗಳಾಗಬೇಕು ಎಂದರು.

ಸ್ವ ಉದ್ಯೋಗಕ್ಕೆ ಮುಂದಾಗುವ ಮಹಿಳೆಯರಿಗೆ ಉಚಿತ ತರಬೇತಿ ಕೊಡಿಸಲಾಗುವುದು, ಜತೆಗೆ ಗೃಹ ಬಳಕೆ ವಸ್ತು, ಸಾಂಬರು ಪದಾರ್ಥಗಳನ್ನು ಸ್ವ-ಸಹಾಯ ಸಂಘಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗುವುದು ಎಂದರು.

ನಬಾರ್ಡ್ ಎಜಿಎಂ ನಟರಾಜನ್ ಮಾತನಾಡಿ, ಡಿಸಿಸಿ ಬ್ಯಾಂಕ್ ಹಾಗೂ ವಿವಿಧ ಇಲಾಖೆಗಳ ಮೂಲಕ ಸ್ವ-ಸಹಾಯ ಗುಂಪುಗಳಿಗೆ ಸ್ವಉದ್ಯೋಗ ಕುರಿತು ಉತ್ತೇಜನೆ ನೀಡಿದರೆ ಕಾಯಕ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ ಎಂದರು.

ಮಹಾಲಕ್ಮೀ ಸ್ವಸಹಾಯ ಸಂಘದ ಪ್ರತಿನಿಧಿ ಮಂಜುಳಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಮೂಲಕ ವಿವಿಧ ಇಲಾಖೆಗಳು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದರು.

ಮಂಜುಳಾ ಮಾತನಾಡಿ, 2002ರಲ್ಲಿ ಸಂಘ ರಚನೆ ಮಾಡಿಕೊಂಡು ಹಣಕಾಸು ವ್ಯವಹಾರದ ಜತೆಗೆ, ಸ್ವ ಉದ್ಯೋಗ ಚಟುವಟಿಕೆ ನಡೆಸಲಾಗುತ್ತಿದೆ. ಈಗ ಸಂಘದಲ್ಲಿ 11 ಲಕ್ಷ ರೂ. ಉಳಿತಾಯವಾಗಿದ್ದು ಈ ಹಣವನ್ನು ಸಂಘದ ಸದಸ್ಯರಿಗೆ ಶೇ.1ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ, ಸಾಲ ವಸೂಲಾತಿಯಲ್ಲೂ ನಮ್ಮ ಸಂಘ ಪ್ರಗತಿ ಸಾಧಿಸಿದೆ ಹರ್ಷ ವ್ಯಕ್ತಪಡಿಸಿದರು.

ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ, ಸಹಕಾರ ಇಲಾಖೆ ಉಪ ನಿಬಂಧಕ ನಿಲ್ಲಪ್ಪನವರ್, ಜವಳಿ ಇಲಾಖೆ ಸಹಾಯಕ ನಿರ್ದೇಶಕ ಸೌಮ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net