

ಬಾಳೆಹೊನ್ನೂರು: ಮಾನವನ ಬದುಕು ಒತ್ತಡಗಳಿಂದ ಬಳಲಿಹೋಗಿದೆ. ಯಂತ್ರದಂತೆ ದುಡಿದರೂ ಸಂಪತ್ತು ಗಳಿಸಿದರೂ ಶಾಂತಿ ಕಾಣುತ್ತಿಲ್ಲ. ಬಾಳಿನ ವಿಕಾಸಕ್ಕೆ ಅಧ್ಯಾತ್ಮದ ಅರಿವು ಬೇಕು. ಆತ್ಮಸಂಯಮ ಆಧ್ಯಾತ್ಮ ಜೀವನದ ಅಡಿಪಾಯ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ವೀರಗಾಸೆ-ಪುರವಂತರ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ವಿಜ್ಞಾನ-ತಂತ್ರಜ್ಞಾನದಿಂದ ಮನುಷ್ಯನ ಪ್ರಗತಿ ಅದ್ಭುತವಾಗಿದೆ. ಭೌತಿಕ ಸಿರಿ ಸಂಪತ್ತು, ಅಧಿಕಾರ ನೆಮ್ಮದಿ ತರಲಾರದು. ಸತ್ಯ, ಧರ್ಮದ ವಿಷಯದಲ್ಲಿ ಒಂದಿಷ್ಟಾದರೂ ಅಧ್ಯಾತ್ಮ ಜ್ಞಾನದ ಅರಿವು ಅವಶ್ಯಕ. ಬಡವನಿಗೆ ನೆಮ್ಮದಿ ಇರುತ್ತದೆ, ಆದರೆ ಹಣ ಇರಲ್ಲ. ಶ್ರೀಮಂತನಿಗೆ ಹಣ ಇದ್ದರೂ ನೆಮ್ಮದಿ ಇರಲ್ಲ. ಹಣ-ನೆಮ್ಮದಿ ಇದ್ದವರಿಗೆ ಒಳ್ಳೆಯ ಗುಣ ಇರಲ್ಲ. ಹಣ, ಗುಣ ಮತ್ತು ನೆಮ್ಮದಿ ಇದ್ದವರು ಈ ಭೂಮಿಯ ಮೇಲೆ ಹೆಚ್ಚು ದಿನ ಇರಲ್ಲ ಎಂದು ತಿಳಿಸಿದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಿರ್ಭಯದಿಂದ ಬಾಳುವುದೇ ನಿಜವಾದ ಬದುಕು. ಬದುಕು ಕಲಿಸುವ ಪಾಠಗಳು ಚಿತ್ರ ವಿಚಿತ್ರ. ಅಂಕಗಳನ್ನು ನೀಡಲು ಯಾರೂ ಇಲ್ಲ. ಸಹನೆ, ತಾಳ್ಮೆ ಇಲ್ಲದಿದ್ದರೆ ಉನ್ನತಿ ಸಾಧ್ಯವಿಲ್ಲ. ವೀರಶೈವ ಧರ್ಮದಲ್ಲಿ ವೀರಗಾಸೆ ಮತ್ತು ಪುರವಂತರಿಗೆ ವಿಶೇಷ ಗೌರವವಿದೆ. ವೀರಭದ್ರನ ಪರಾಕ್ರಮ ಧರ್ಮ ಸಂರಕ್ಷಣೆಗೆ ಮೂಲವಾಗಿದೆ ಎಂದರು.