

ಮೈಸೂರು: ವಿದ್ಯೆ, ಜ್ಞಾನ ಸಂಪಾದನೆಯಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ಅಂತಹ ಜ್ಞಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಗಳಿಸಿದ್ದರು ಎಂದು ಬಿ.ಎನ್. ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸ್‌ನ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಹೇಳಿದರು.
ವಿಜಯನಗರದ 3ನೇ ಹಂತದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಜ್ಞಾನೋತ್ಸವ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಹುಟ್ಟಿದ ದಿನವನ್ನು ಜ್ಞಾನದ ದಿನವಾಗಿ ವಿಶ್ವಸಂಸ್ಥೆ ಘೋಷಿಸಿರುವುದು ಜಗತ್ತಿನ ವಿಸ್ಮಯವಾಗಿದೆ. ಅವರು ಪಡೆದ ಜ್ಞಾನದಿಂದ ವೈಜ್ಞಾನಿಕ ಚಿಂತನೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಶೋಷಣೆಯ ಮೂಲ ದೌರ್ಬಲ್ಯವಾಗಿರುವುದರಿಂದ ನಿಮ್ಮ ನಿಮ್ಮ ದೌರ್ಬಲ್ಯಗಳನ್ನು ಗುರುತಿಸಿಕೊಳ್ಳಿ ಎಂದರು.
ಮೇಲ್ವರ್ಗದವರು ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ನಮ್ಮನ್ನು ಕಟ್ಟಿಹಾಕಿದರು. ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಕೆಳವರ್ಗದವರಿಗೆ ಸಂಸ್ಕೃತ ಓದಲು ಬಿಡಲಿಲ್ಲ, ಶಾಲಾ, ಕಾಲೇಜುಗಳಿಂದ ದೂರವಿಟ್ಟರು. ಇದನ್ನು ಅರಿತ ಅಂಬೇಡ್ಕರ್ ಈ ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ತಿಳಿದುಕೊಂಡಿದ್ದರು ಎಂದರು.
ಅಂಬೇಡ್ಕರ್ 35 ವರ್ಷಗಳ ಕಾಲ ಓದುವುದಕ್ಕೆ ಮೀಸಲಿಟ್ಟರು. ಆದ್ದರಿಂದ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು, ಜ್ಞಾನಭಂಡಾರವನ್ನು ತುಂಬಿಸಿಕೊಳ್ಳಬೇಕು. ವಿಶಿಷ್ಟವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು, ಚಿಂತನಾಶೀಲರಾಗಬೇಕು. ನಿಮ್ಮ ಉದ್ಧಾರ ನಿಮ್ಮಿಂದಲೇ ಆಗಬೇಕು. ಅಂಬೇಡ್ಕರ್ ವಿಚಾರಗಳನ್ನು ಹೆಚ್ಚಾಗಿ ಓದಿಕೊಳ್ಳಿ. ಅಂಬೇಡ್ಕರ್ ನಿಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದರು.
ವಿದ್ಯಾವರ್ಧಕ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಎಲ್. ಚಂದ್ರಶೇಖರ್ ಐಜೂರು, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಎಂ. ತಿಬ್ಬಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ. ಸಿದ್ದಲಿಂಗು ಮಾತನಾಡಿದರು. ನಿಲಯಪಾಲಕರಾದ ಕೆ.ಎ.ಎಸ್. ಪ್ರದೀಪ್, ಶಿವಮಲ್ಲಯ್ಯ, ಚಿಕ್ಕೀರಯ್ಯ, ರಾಜೇಶ್ವರಿ, ವಸಂತಕುಮಾರಿ, ಗಾಯತ್ರಿ, ಕಮಲಾಕ್ಷಿ, ಶಿವಪ್ಪ, ಮಹೇಶ್, ಕಾರ್ತಿಕ್, ಹುಯ್ಯಂಬಳ್ಳಿ ಚೇತನ್ ಇದ್ದರು. ಈ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.